ನವದೆಹಲಿ: ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಜಯ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ಯುಪಿಎಸ್‌ಸಿ ಅಧ್ಯಕ್ಷರಾಗಿ ಮಂಗಳವಾರ ನೇಮಕ ಮಾಡಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯ ಈ ಕುರಿತ ಆದೇಶ ಹೊರಡಿಸಿದೆ.
ಅಧ್ಯಕ್ಷೆಯಾಗಿದ್ದ ಪ್ರೀತಿ ಸೂದನ್ ಅವರ ಅವಧಿ ಏಪ್ರಿಲ್ 29ಕ್ಕೆ ಮುಗಿದಿದ್ದು, ಅಂದಿನಿಂದ ಈ ಹುದ್ದೆ ತೆರವಾಗಿತ್ತು. ಅಜಯ್ ಕುಮಾರ್ ಅವರ ನೇಮಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
1985ನೇ ತಂಡದ, ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಅಜಯ್ ಕುಮಾರ್, 2019ರ ಆಗಸ್ಟ್ 23ರಿಂದ 2022ರ ಅಕ್ಟೋಬರ್ 31ರವರೆಗೂ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ, ಕೇಂದ್ರ ಲೋಕಸೇವಾ ಆಯೋಗದಲ್ಲಿ (ಯುಪಿಎಸ್‌ಸಿ) ಇಬ್ಬರು ಸದಸ್ಯರ ಸ್ಥಾನಗಳು ಖಾಲಿ ಇವೆ. ಯುಪಿಎಸ್‌ಸಿ ಅಧಿಕಾರ ಅವಧಿಯು ಆರು ವರ್ಷ ಕಾಲ ಅಥವಾ 65 ವರ್ಷ ಆಗುವವರೆಗೂ ಇರುತ್ತದೆ.
ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ಕೇಂದ್ರ ಆಡಳಿತಾತ್ಮಕ ಹುದ್ದೆಗಳಿಗೆ ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಯುಪಿಎಸ್‌ಸಿ ಕೈಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.