ADVERTISEMENT

ಗೋವಾ ಮಾಜಿ ಸಿಎಂ ರವಿ ನಾಯಕ್ ಬಿಜೆಪಿಗೆ: ಮೂರಕ್ಕೆ ಇಳಿದ ಕಾಂಗ್ರೆಸ್ ಶಾಸಕರ ಸಂಖ್ಯೆ

ಪಿಟಿಐ
Published 8 ಡಿಸೆಂಬರ್ 2021, 6:03 IST
Last Updated 8 ಡಿಸೆಂಬರ್ 2021, 6:03 IST
ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಅವರ ಸಮ್ಮುಖದಲ್ಲಿ ರವಿ ನಾಯಕ್ (ಮಧ್ಯದಲ್ಲಿರುವವರು) ಬಿಜೆಪಿ ಸೇರಿದರು – ಐಎಎನ್‌ಎಸ್ ಚಿತ್ರ
ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಅವರ ಸಮ್ಮುಖದಲ್ಲಿ ರವಿ ನಾಯಕ್ (ಮಧ್ಯದಲ್ಲಿರುವವರು) ಬಿಜೆಪಿ ಸೇರಿದರು – ಐಎಎನ್‌ಎಸ್ ಚಿತ್ರ   

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ರವಿ ನಾಯಕ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪಣಜಿಯಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಅವರ ಸಮ್ಮುಖದಲ್ಲಿ ರವಿ ನಾಯಕ್ ಬಿಜೆಪಿ ಸೇರಿದ್ದಾರೆ.

ಮಂಗಳವಾರವಷ್ಟೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆಯೊಂದಿಗೆ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 3ಕ್ಕೆ ಇಳಿಕೆಯಾಗಿದೆ. 2017ರ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಮಾತ್ರ ದೇಶವನ್ನು ಮುಂದಕ್ಕೆ ಕೊಂಡೊಯ್ಯಬಲ್ಲರು ಮತ್ತು ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಬಲ್ಲರು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 27 ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂದು ನಾಯಕ್ ಹೇಳಿದ್ದಾರೆ. ನಾಯಕ್ ಅವರ ಮಕ್ಕಳಾದ ರಾಯ್ ಮತ್ತು ರಿತೇಶ್ ಈಗಾಗಲೇ ಬಿಜೆಪಿ ಸೇರಿದ್ದಾರೆ.

‘ನಾಯಕ್ ಮಕ್ಕಳು ಬಿಜೆಪಿ ಸೇರಿದ ಬೆನ್ನಲ್ಲೇ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು. ಅವರು ಕಾಂಗ್ರೆಸ್ ಶಾಸಕರಾಗಿದ್ದುಕೊಂಡು ಮಕ್ಕಳನ್ನು ಬಿಜೆಪಿಗೆ ಸೇರಿಸಿದ್ದಾರೆ. ಎರಡು ದೋಣಿಯಲ್ಲಿ ಕಾಲು ಇಡುವ ಪ್ರಯತ್ನ ಮಾಡಿದ್ದಾರೆ. ಅಂಥ ನಾಯಕರು ಕಾಂಗ್ರೆಸ್‌ಗೆ ಬೇಕಿಲ್ಲ. ಪಕ್ಷ ನಿಷ್ಠೆ ಹೊಂದಿರುವ ನಾಯಕರು ನಮಗೆ ಬೇಕು’ ಎಂದು ಗೋವಾ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್ ಛೋಡಂಕರ್ ಪ್ರತಿಕ್ರಿಯಿಸಿದ್ದಾರೆ.

‘ಗೋವಾದಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಆಡಳಿತಾರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ. ಇಂಥ ರಾಜಕೀಯ ನಡೆಗಳನ್ನು ತಡೆಯುವ ನಿಟ್ಟಿನಲ್ಲಿ ಇಷ್ಟು ವರ್ಷಗಳ ಕಾಲ ಕಾಂಗ್ರೆಸ್‌ ಏನೂ ಮಾಡಿಲ್ಲ’ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಇತ್ತೀಚೆಗೆ ಟೀಕಿಸಿದ್ದರು. ಈ ಬಾರಿ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟಪರೀಕ್ಷೆ ನಡೆಸಲು ಟಿಎಂಸಿ ಕೂಡ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.