
ಜೈಪುರ: ಬಿಜೆಪಿಯ ಮಾಜಿ ಸಂಸದ ಸುಖಬೀರ್ ಸಿಂಗ್ ಜೈನ್‌ಪುರಿಯಾ ಅವರು ಮಹಿಳೆಯೊಬ್ಬರು ಮುಸ್ಲಿಂ ಎಂದು ಗೊತ್ತಾದ ನಂತರ ಅವರಿಗೆ ತಾವು ನೀಡಿದ್ದ ಹೊದಿಕೆಯನ್ನು ಮರಳಿ ಪಡೆದಿದ್ದು, ವಿವಾದಕ್ಕೆ ಕಾರಣವಾಗಿದೆ.
ಟೋಂಕ್ ಗ್ರಾಮದ ದೇವಸ್ಥಾನವೊಂದರ ಆವರಣದಲ್ಲಿ ಸುಖಬೀರ್ ಅವರು ಭಾನುವಾರ ಮಧ್ಯಾಹ್ನ ತಮ್ಮ ಅನುಯಾಯಿಗಳ ಮೂಲಕ ಮಧ್ಯಾಹ್ನ ಬಡ ಮಹಿಳೆಯರಿಗೆ ಹೊದಿಕೆಗಳನ್ನು ವಿತರಿಸಿದರು. ಫೆಬ್ರುವರಿ 28ರಂದು ಪ್ರಧಾನಿ ಮೋದಿ ಅವರು ಅಜ್ಮೇರ್‌ಗೆ ಭೇಟಿ ನೀಡಲಿದ್ದು, ಅದಕ್ಕಾಗಿ ಆಮಂತ್ರಿಸಿದ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರಿಗೆ ಹೊದಿಕೆಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಒಬ್ಬ ಮಹಿಳೆಯು ಮುಸ್ಲಿಂ ಎಂದು ಗೊತ್ತಾದದ್ದೇ, ಆಕೆಗೆ ಹೊದಿಕೆಯನ್ನು ವಾಪಸ್ ನೀಡುವಂತೆ ಸುಖಬೀರ್ ಕೇಳಿದರು. ‘ಮೋದಿ ಅವರನ್ನು ಬೈಯುವವರಿಗೆ ಹೊದಿಕೆ ಪಡೆಯುವ ಹಕ್ಕು ಇಲ್ಲ’ ಎಂದು ಅವರು ಹೇಳಿದರು. ಈ ದೃಶ್ಯದ ವಿಡಿಯೊ ಹರಿದಾಡಿದೆ.
ಟೋಂಕ್-ಸವಾಯಿ ಮಾಧೋಪುರ್ ಕ್ಷೇತ್ರದ ಕಾಂಗ್ರೆಸ್ ಸಂಸದ ಹರೀಶ್ ಚಂದ್ರ ಮೀಣಾ ಅವರು ಈ ಘಟನೆಯನ್ನು ಖಂಡಿಸಿದ್ದು, ಬಡವರಿಗೆ ದಾನ ನೀಡಿ, ಧರ್ಮದ ಹೆಸರಿನಲ್ಲಿ ಭೇದ–ಭಾವ ಮಾಡುತ್ತಾ ಅದನ್ನು ವಾಪಸ್ ಪಡೆಯುವುದು ಅಮಾನವೀಯ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.