ADVERTISEMENT

ಲೋಹಿಯಾರಿಂದ ಪ್ರಭಾವಿತ ಹೋರಾಟದ ಹಿನ್ನೆಲೆಯ ‘ಶರದ್ ಯಾದವ್’

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 20:31 IST
Last Updated 12 ಜನವರಿ 2023, 20:31 IST
ಶರದ್ ಯಾದವ್
ಶರದ್ ಯಾದವ್   

ನವದೆಹಲಿ: ಸುಮಾರು ನಾಲ್ಕು ದಶಕಗಳ ಅವಧಿಯ ರಾಜಕೀಯ ಬದುಕಿನಲ್ಲಿ ತಮ್ಮ ಹೋರಾಟದಿಂದಲೇ ಗಮನಸೆಳೆದಿದ್ದ, ಜನತಾದಳ ಪಕ್ಷದ ಏರಿಳಿತದಲ್ಲಿ ಸಕ್ರಿಯವಾಗಿದ್ದ ಶರದ್ ಯಾದವ್ ಇನ್ನು ಇತಿಹಾಸ.

ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯ ಬಬೈ ಗ್ರಾಮದಲ್ಲಿ 1947ರ ಜುಲೈ 1ರಂದು ಜನಿಸಿದ್ದ ಅವರು, ರಾಜಕೀಯದ ಉತ್ತುಂಗದಲ್ಲಿ ಬಿಹಾರವನ್ನು ಕಾರ್ಯಕ್ಷೇತ್ರವಾಗಿಸಿಕೊಂಡಿದ್ದರು.

ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ಹಂತದಲ್ಲೇ ರಾಜಕೀಯವಾಗಿ ಸಕ್ರಿಯರಾಗಿದ್ದರು. ಕೃಷಿಕ ಕುಟುಂಬ ಹಿನ್ನೆಲೆಯಿಂದ ಬಂದ ಶರದ್ ಯಾದವ್ ಜಬಲ್‌ಪುರ್‌ನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್ ಪದವೀಧರರು.

ADVERTISEMENT

1974ರ ಉಪಚುನಾವಣೆಯಲ್ಲಿ ಲೋಕಸಭೆಗೆ ಮೊದಲಿಗೆ ಆಯ್ಕೆಯಾದರು. 1975ರಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿ ಲೋಕಸಭೆ ವಿಸರ್ಜನೆ ಆದ ಕಾರಣ ಒಂದು ವರ್ಷದ ಅವಧಿ ಇತ್ತು.

ಅವರು ಲೋಕಸಭೆಗೆ ಏಳು, ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು. ಜನತಾದಳ ಪಕ್ಷದ ರಾಷ್ಟ್ರೀಯ ಸ್ಥಾಪಕ ಅಧ್ಯಕ್ಷರೂ ಹೌದು. 2003ರಿಂದ 2016ರವರೆಗೆ ಅಧ್ಯಕ್ಷರಾಗಿ ಆ ಪಕ್ಷವನ್ನು ಮುನ್ನಡೆಸಿದ್ದರು.

ಜನತಾದಳ ಅಸ್ತಿತ್ವಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾಗಿದ್ದ ಶರದ್‌ ಯಾದವ್, 1989ರಲ್ಲಿ ವಿ.ಪಿ.ಸಿಂಗ್‌ ನೇತೃತ್ವದಲ್ಲಿ ಕೇಂದ್ರದಲ್ಲಿ ರಚನೆಯಾದ ಮೊದಲ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಂಡಲ ವರದಿ ಜಾರಿ ಪ್ರಕ್ರಿಯೆಯ ಪ್ರಮುಖರಲ್ಲಿ ಇವರೂ ಒಬ್ಬರು.

ಜನತಾದಳ 1999ರಲ್ಲಿ ಇಬ್ಬಾಗವಾದಾಗ ಇವರ ನೇತೃತ್ವದ ಜನತಾದಳ (ಸಂಯುಕ್ತ), ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಸರ್ಕಾರ ಬೆಂಬಲಿಸಿತು. ಮತ್ತೊಂದು ಬಣ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜನತಾದಳ (ಜಾತ್ಯತೀತ) ಎಂದು ಅಸ್ವಿತ್ವ ಉಳಿಸಿಕೊಂಡಿತು. ಶರದ್‌ ಯಾದವ್ ಅವರು ಎ.ಬಿ.ವಾಜಪೇಯಿ ಸಂಪುಟದಲ್ಲಿಯೂ ಸಚಿವರಾಗಿದ್ದರು.

ಬಿಜೆಪಿ ನೆತೃತ್ವದ ಎನ್‌ಡಿಎ ಮೈತ್ರಿಕೂಟದ ಸಂಚಾಲಕರಾಗಿದ್ದರು. 2013ರಲ್ಲಿ ನಿತೀಶ್‌ಕುಮಾರ್‌ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಾಗ ಮೈತ್ರಿಯಿಂದ ಹೊರಬಿದ್ದರು. 2015ರಲ್ಲಿ ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನಿತೀಶ್ ಕುಮಾರ್ ಮತ್ತು ಲಾಲೂ ಯಾದವ್ ಪರಸ್ಪರ ಕೈಜೋಡಿಸಲು ಪ್ರಮುಖ ಕಾರಣರಾಗಿದ್ದವರು ಶರದ್‌ ಯಾದವ್.

ಆದರೆ, ಇದೇ ನಿತೀಶ್ ಕುಮಾರ್ ಅವರು ಮತ್ತೆ 2017ರಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಲು ಮುಂದಾದಾಗ ಅದನ್ನು ವಿರೋಧಿಸಿ ವಿರೋಧ ಪಕ್ಷದಲ್ಲಿಯೇ ಉಳಿದರು. ಆಗ ಲೋಕತಾಂತ್ರಿಕ ಜನತಾದಳ ಪಕ್ಷವನ್ನು ಸ್ಥಾಪಿಸಿದರು. ಆದರೆ, ಅದು ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಇದಕ್ಕೆ ಅವರ ಆರೋಗ್ಯ ಸ್ಥಿತಿಯೂ ಕಾರಣವಾಗಿದ್ದು, ಕ್ರಮೇಣ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು. 2022ರಲ್ಲಿ ತಮ್ಮ ಪಕ್ಷವನ್ನು ಆರ್‌ಜೆಡಿ ಜೊತೆ ವಿಲೀನಗೊಳಿಸಿದರು.

ಸುಮಾರು ನಾಲ್ಕು ದಶಕಗಳು ರಾಜಕೀಯವಾಗಿ ಸಕ್ರಿಯರಾಗಿದ್ದ ಅವರು ಈಗ ಇತಿಹಾಸದ ಭಾಗವಾಗಿದ್ದಾರೆ. ಒಂದು ವರ್ಣರಂಜಿತ ಅಧ್ಯಾಯ ಅಂತ್ಯಗೊಂಡಿದೆ. (ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.