ADVERTISEMENT

‘ಕರ್ನಾಟಕ ಮಲ್ಲ’ ಕನ್ನಡ ದಿನಪತ್ರಿಕೆ ಸಂಸ್ಥಾಪಕ ಮುರಳೀಧರ್ ಶಿಂಗೋಟೆ ನಿಧನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 12:48 IST
Last Updated 7 ಆಗಸ್ಟ್ 2020, 12:48 IST
ಮುರಳೀಧರ್ ಶಿಂಗೋಟೆ
ಮುರಳೀಧರ್ ಶಿಂಗೋಟೆ   

ಪುಣೆ: ಮುಂಬೈನಲ್ಲಿ ‘ಕರ್ನಾಟಕ ಮಲ್ಲ’ ಕನ್ನಡ ದಿನಪತ್ರಿಕೆ ಸಂಸ್ಥಾಪಕ ಮುರಳೀಧರ್ ಶಿಂಗೋಟೆ (85) ಗುರುವಾರ ಮುಂಬೈನಲ್ಲಿ ನಿಧನರಾದರು.

ಮುಂಬೈ ಪತ್ರಿಕೋದ್ಯಮದಲ್ಲಿ ಭಾಷಾ ಸಾಮರಸ್ಯದ ನಡೆಗೆ ಮುನ್ನುಡಿ ಬರೆದವರು ಮುರಳೀಧರ್ ಶಿಂಗೋಟೆ. ಮರಾಠಿಗರಾಗಿದ್ದರೂ ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿದ ಹೆಗ್ಗಳಿಕೆ ಅವರದು.

1938ರ ಮಾರ್ಚ್ 7 ರಂದು ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಉಂಬ್ರಾಜ್ ಗ್ರಾಮದಲ್ಲಿ ಅವರು ಜನಿಸಿದರು. ನಾಲ್ಕನೇ ತರಗತಿವರೆಗೆ ಓದಿದ್ದ ಶಿಂಗೋಟೆ ಅವರು, ಜೀವನೋಪಾಯಕ್ಕಾಗಿ ಮುಂಬೈ ಸೇರಿದರು. ಆರಂಭದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಅವರು, ನಂತರ ಪತ್ರಿಕಾ ವಿತರಕ ವೃತ್ತಿ ಆರಂಭಿಸಿದರು.

ADVERTISEMENT

ಸಾರ್ವಜನಿಕರಿಗೆ ತಿಳಿಯಬಲ್ಲ ಮತ್ತು ಅರ್ಥವಾಗುವಂತಹ ಭಾಷೆಯಲ್ಲಿ ಪತ್ರಿಕೆಯೊಂದನ್ನು ಪ್ರಕಟಿಸುವ ಕನಸು ಕಂಡಿದ್ದ ಅವರು, 1994ರಲ್ಲಿ ಅವರು ಮುಂಬೈ ಚೌಫೇರ್ ಎಂಬ ಮರಾಠಿ ಭಾಷೆಯ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ನಂತರ ಇತರ ಭಾಷಾ ದಿನಪತ್ರಿಕೆಗಳಾದ ‘ಕರ್ನಾಟಕ ಮಲ್ಲ’, ‘ಯಶೋಭೂಮಿ’, ‘ತಮಿಳ್ ಟೈಮ್ಸ್’ ಮತ್ತು ‘ಪುಣ್ಯನಗರಿ’ಯನ್ನು ಪ್ರಾರಂಭಿಸಿದರು.

ಅವರಿಗೆ ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ. ಹುಟ್ಟೂರಿನಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು.

ಮೃತರಿಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ಶಿಂಗೋಟೆ ಅವರ ಬದುಕಿನ ಪಯಣ ಹಲವರಿಗೆ ಮಾರ್ಗದರ್ಶನದ ಬೆಳಕಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.