ADVERTISEMENT

ಗುಜರಾತ್‌ನಲ್ಲಿ ನಕಲಿ ಮದ್ಯ ಸೇವನೆ: 7 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2022, 18:52 IST
Last Updated 25 ಜುಲೈ 2022, 18:52 IST
ಆಸ್ಪತ್ರೆ ಚಿತ್ರ
ಆಸ್ಪತ್ರೆ ಚಿತ್ರ   

ಬೊಟಾಡ, ಗುಜರಾತ್‌: ‘ನಕಲಿ ಸಾರಾಯಿ ಸೇವಿಸಿ 7 ಮಂದಿ ಮೃತಪಟ್ಟಿದ್ದು, 10 ಜನರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆಶಿಶ್‌ ಭಾಟಿಯಾ ಹೇಳಿದ್ದಾರೆ.

‘ಬೊಟಾಡ ಜಿಲ್ಲೆಯ ರೊಜಿಡಾ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದೆ’ ಎಂದು ತಿಳಿಸಿದ್ದಾರೆ.

‘ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ರೋಜಿಡಾ ಹಾಗೂ ಸುತ್ತಲಿನ ಕೆಲ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ ಬರ್ವಾಲಾ ಹಾಗೂ ಬೊಟಾಡದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈ ಪೈಕಿ ಇಬ್ಬರು ಬೆಳಿಗ್ಗೆಯೇ ಸಾವಿಗೀಡಾಗಿದ್ದರು. ಸಂಜೆಯ ವೇಳೆಗೆ ಇನ್ನೂ ಐವರು ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಭಾನುವಾರ ರಾತ್ರಿ ಅಂಗಡಿಯೊಂದರಲ್ಲಿ ಮದ್ಯ ಖರೀದಿಸಿದ್ದೆವು. ಅದನ್ನು ಸೇವಿಸಿದ ಬಳಿಕ ಸುಮಾರು 15 ಮಂದಿಯ ಆರೋಗ್ಯ ಹದಗೆಟ್ಟಿತ್ತು. ಸೋಮವಾರ ಬೆಳಿಗ್ಗೆ ನಮ್ಮನ್ನೆಲ್ಲಾ ಆಸ್ಪ‍ತ್ರೆಗೆ ದಾಖಲಿಸಲಾಗಿತ್ತು’ ಎಂದು ಹಿಮ್ಮತ್ ಭಾಯ್‌ ಎಂಬುವರು ಹೇಳಿದ್ದಾರೆ. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಪ್ರಕರಣದ ತನಿಖೆಗಾಗಿ ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಈ ತಂಡ ಶೀಘ್ರವೇ ತಪ್ಪಿತಸ್ಥರನ್ನು ಪತ್ತೆಹಚ್ಚಲಿದೆ’ ಎಂದು ಭಾವ್‌ನಗರದ ಐಜಿಪಿ ಅಶೋಕ್‌ಕುಮಾರ್‌ ಯಾದವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.