
ಪಿಟಿಐ
ಲಂಡನ್: ಪ್ರಸಿದ್ಧ ಐವಿಎಫ್ ವೈದ್ಯೆ, ‘ಕ್ರಿಯೇಟ್ ಫರ್ಟಿಲಿಟಿ’ಯ ಸಂಸ್ಥಾಪಕಿ ಪ್ರೊ. ಗೀತಾ ನರಗುಂದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಭಾರತ ಮೂಲದ ನಾಲ್ವರು ಬ್ರಿಟನ್‌ನ ‘ಹೌಸ್ ಆಫ್ ಲಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದಾರೆ.
ಗೀತಾ ಅವರ ಜತೆಗೆ, ‘ಎಐ ಪಾಲಿಸಿ ಲ್ಯಾಬ್ಸ್’ನ ಸಂಸ್ಥಾಪಕ ಉದಯ್ ನಾಗರಾಜು, ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿ ಯುರೋಪಿಯನ್ ಪಾರ್ಲಿಮೆಂಟ್‌ನ ಮಾಜಿ ಸದಸ್ಯೆ ನೀನಾ ಗಿಲ್, ವಾಯವ್ಯ ಲಂಡನ್‌ನ ಬ್ರೆಂಟ್ ಕೌನ್ಸಿಲರ್ ಶಮಾ ಟ್ಯಾಟ್ಲರ್ ಅವರನ್ನು ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಲೇಬರ್ ಪಕ್ಷದ ವತಿಯಿಂದ ನಾಮನಿರ್ದೇಶನ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕಿಂಗ್ ಚಾರ್ಲ್ಸ್–3 ಅವರು ಬ್ರಿಟನ್ ಸಂಸತ್ತಿನ ಮೇಲ್ಮನೆಗೆ ಈ ನಾಲ್ವರನ್ನು ನೇಮಕ ಮಾಡಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಪ್ರೊ. ಗೀತಾ ನರಗುಂದ ಅವರು ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದು, ಲಿಂಗ ಸಮಾನತೆಯ ಪ್ರಚಾರಕಿಯೂ ಆಗಿದ್ದಾರೆ. 2025ರ ಜುಲೈವರೆಗೆ ಕ್ರಿಯೇಟ್ ಫರ್ಟಿಲಿಟಿಯ ವೈದ್ಯಕೀಯ ನಿರ್ದೇಶಕಿಯಾಗಿದ್ದರು. ಅವರು ಹೆಲ್ತ್ ಈಕ್ವಾಲಿಟಿ ಫೌಂಡೇಷನ್‌ನ ಸ್ಥಾಪಕಿ ಮತ್ತು ಟ್ರಸ್ಟಿ. ಅಲ್ಲದೆ ಆರೋಗ್ಯ ಅಸಮಾನತೆಗಳನ್ನು ಹೋಗಲಾಡಿಸಲು ಮತ್ತು ಜಾಗತಿಕವಾಗಿ ಸಂತಾನೋತ್ಪತ್ತಿ ಆಯ್ಕೆಗಳು ಹಾಗೂ ಆರೈಕೆ ಕ್ಷೇತ್ರವನ್ನು ಸುಧಾರಿಸಲು ಶ್ರಮಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಲೇಬರ್ ಪಕ್ಷದ 25 ನಾಮನಿರ್ದೇಶನಗಳಲ್ಲಿ ಭಾರತೀಯ ಮೂಲದ ನಾಲ್ವರು ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.