ADVERTISEMENT

ಪುಲ್ವಾಮಾ: ನಾಲ್ವರು ಉಗ್ರರ ಹತ್ಯೆ

ಗುಂಡಿನ ಚಕಮಕಿಯಲ್ಲಿ ಮೂವರು ಯೋಧರಿಗೆ ಗಾಯ

ಪಿಟಿಐ
Published 1 ಏಪ್ರಿಲ್ 2019, 20:21 IST
Last Updated 1 ಏಪ್ರಿಲ್ 2019, 20:21 IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಸಾಯಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.

ಲಸ್ಸಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ನಿಖರ ಮಾಹಿತಿ ಪಡೆದ ಭದ್ರತಾಪಡೆಗಳು ಸ್ಥಳವನ್ನು ಸುತ್ತುವರಿದು ಶೋಧಕಾರ್ಯ ನಡೆಸಿದವು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಶೋಧದ ವೇಳೆ ಭದ್ರತಾ ಪಡೆಗಳ ಮೇಲೆಯೇ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಗುಂಡುಹಾರಿಸಿದಾಗ ನಾಲ್ವರು ಉಗ್ರರು ಹತರಾದರು. ಎನ್‌ಕೌಂಟರ್ ಸ್ಥಳದಲ್ಲೇ ಮೂವರ ಮೃತದೇಹ ಸಿಕ್ಕಿದೆ.

ADVERTISEMENT

ಮೃತ ಉಗ್ರರ ಗುರುತು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಮೂವರು ಸೇನಾ ಯೋಧರು ಮತ್ತು ಒಬ್ಬರು ಪೊಲೀಸ್‌ ಸೇರಿದ್ದಾರೆ.ಉಗ್ರರು ಅಡಗಿದ್ದ ಸ್ಥಳದಿಂದ ಮದ್ದುಗುಂಡು, ಶಸ್ತ್ರಾಸ್ತ್ರವನ್ನು ವಶಕ್ಕೆ ಪಡೆಯಲಾಗಿದೆ.

ಜೆಇಎಂ ಉಗ್ರನ ಸೆರೆ
ನವದೆಹಲಿ: ಜೈಷೆ ಎ ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ್ದ ಶಂಕಿತ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಶ್ರೀನಗರದಲ್ಲಿ ಬಂಧಿಸಿದೆ. ಈತನ ತಲೆಗೆ ₹2 ಲಕ್ಷ ಘೋಷಣೆ ಮಾಡಲಾಗಿತ್ತು.

ಕುಪ್ವಾರದ ನಿವಾಸಿ ಫೈಯಾಜ್‌ ಅಹಮದ್‌ ಲೋನ್ ಬಂಧಿತ ವ್ಯಕ್ತಿ.

ಪ್ರಕರಣವೊಂದರಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ ಈತ 2015 ರಿಂದ ತಲೆಮರೆಸಿಕೊಂಡಿದ್ದ.ಇವನ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನುರಹಿತ ಬಂಧನ ವಾರಂಟ್‌ ಹೊರಡಿಸಿತ್ತು.

ಶಂಕಿತ ಉಗ್ರನ ಬಂಧನ

ಬನಿಹಾಲ್‌/ಜಮ್ಮು: ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ದಿನಗಳ ಹಿಂದೆ ಸಿಆರ್‌ಪಿಎಫ್‌ನ ಬೆಂಗಾವಲು ಗುರಿಯಾಗಿರಿಸಿಕೊಂಡು ನಡೆದ ಬಾಂಬ್‌ ದಾಳಿಯ ಶಂಕಿತ ಉಗ್ರನನ್ನು ಸೋಮವಾರ ಬಂಧಿಸಲಾಗಿದೆ.

ಶೋಪಿಯಾನ್‌ ಜಿಲ್ಲೆಯ ವಾಲಿ ಗ್ರಾಮದ ನಿವಾಸಿ ಅಮಿನ್‌ ರಾಥರ್‌ ಬಂಧಿತ ಆರೋಪಿ. ಪೊಲೀಸ್‌ ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.