ADVERTISEMENT

ಕಾಶ್ಮೀರ: ಉಗ್ರರ ಗುಂಡಿನ ದಾಳಿಗೆ ನಾಲ್ವರು ಪೊಲೀಸರು ಬಲಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 17:44 IST
Last Updated 29 ಆಗಸ್ಟ್ 2018, 17:44 IST
ಅನಂತನಾಗ್‌ ಜಿಲ್ಲೆಯ ಮುನಿವಾರ್ಡ್‌ ಗ್ರಾಮದಲ್ಲಿ ಬುಧವಾರ ಉಗ್ರರು ಅಡಗಿದ್ದ ಮನೆಯೊಂದರ ಸಮೀಪ ಕಾರ್ಯಾಚರಣೆಗೆ ಸಿದ್ಧರಾದ ಯೋಧರು –ಪಿಟಿಐ ಚಿತ್ರ
ಅನಂತನಾಗ್‌ ಜಿಲ್ಲೆಯ ಮುನಿವಾರ್ಡ್‌ ಗ್ರಾಮದಲ್ಲಿ ಬುಧವಾರ ಉಗ್ರರು ಅಡಗಿದ್ದ ಮನೆಯೊಂದರ ಸಮೀಪ ಕಾರ್ಯಾಚರಣೆಗೆ ಸಿದ್ಧರಾದ ಯೋಧರು –ಪಿಟಿಐ ಚಿತ್ರ   

ಶ್ರೀನಗರ(ಪಿಟಿಐ): ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಅರಹಾಮಾ ಗ್ರಾಮದಲ್ಲಿ ಬುಧವಾರ ಉಗ್ರರು ನಡೆಸಿದ ಗುಂಡಿನ ದಾಳಿಗೆ ನಾಲ್ವರು ಪೊಲೀಸರು ಬಲಿಯಾಗಿದ್ದಾರೆ.

‘ತಮ್ಮ ವಾಹನವನ್ನು ದುರಸ್ತಿ ಮಾಡುತ್ತಿದ್ದ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರಗಳು ಕಾಣೆಯಾಗಿವೆ. ಉಗ್ರರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ’ ಎಂದೂ ತಿಳಿಸಿದ್ದಾರೆ.

ADVERTISEMENT

ಕಮಾಂಡರ್‌ ಸೇರಿ ಇಬ್ಬರು ಉಗ್ರರ ಹತ್ಯೆ:

ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಮುನಿವಾರ್ಡ್‌ ಗ್ರಾಮದಲ್ಲಿ ಭದ್ರತಾಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಕಮಾಂಡರ್‌ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ.

ದಕ್ಷಿಣ ಕಾಶ್ಮೀರದ ಹವೂರ ಪ್ರದೇಶದ ನಿವಾಸಿ ಹಾಗೂ ಹಿಜ್ಬುಲ್‌ ಕಮಾಂಡರ್‌ ಅಲ್ತಾಫ್‌ ಅಹಮ್ಮದ್‌ ದಾರ್‌ ಮತ್ತು ಕುಲ್ಗಾಂ ಜಿಲ್ಲೆಯ ಖುದ್ವಾನಿ ಗ್ರಾಮದ ಒಮರ್‌ ರಾಷಿದ್‌ ವಾನಿ ಮೃತ ಉಗ್ರರು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾಪಡೆಗಳು ಜಂಟಿಯಾಗಿ ಶೋಧಕಾರ್ಯ ನಡೆಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿದ ಯೋಧರು ಈ ಇಬ್ಬರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ನಡೆದ ದಾಳಿ ಪ್ರಕರಣಗಳು ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಅಲ್ತಾಫ್‌ ಅಹಮ್ಮದ್‌ ದಾರ್‌ ಭಾಗಿಯಾಗಿದ್ದ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.