ADVERTISEMENT

ಜಾರ್ಖಂಡ್‌ ವಿಧಾನಸಭಾ ಚುನಾವಣೆ: ಸ್ಥಳೀಯರ ನಿರ್ಲಕ್ಷ್ಯದಿಂದ ಬಿಜೆಪಿಗೆ ಸೋಲು

ರಾಷ್ಟ್ರೀಯ ವಿಷಯಗಳಿಗೆ ಆದ್ಯತೆ ನೀಡಿದ್ದ ಬಿಜೆಪಿ ಅಧಿಕಾರದಿಂದ ಕೆಳಕ್ಕೆ

ಅಭಯ್ ಕುಮಾರ್
Published 24 ಡಿಸೆಂಬರ್ 2019, 3:45 IST
Last Updated 24 ಡಿಸೆಂಬರ್ 2019, 3:45 IST
ಲಾತೆಹಾರ್‌ನ ಬುಡಕಟ್ಟು ಪ್ರದೇಶದಲ್ಲಿ ಆರಂಭವಾಗಬೇಕಿದ್ದ ‘ನೆತರ್‌ಹಾಟ್ ಫೀಲ್ಡ್‌ ಫೀರಿಂಗ್ ರೇಂಜ್‌’ ಯೋಜನೆಯನ್ನು ವಿರೋಧಿಸಿ ಸ್ಥಳೀಯರು ನಡೆಸಿದ್ದ ಪ್ರತಿಭಟನೆ
ಲಾತೆಹಾರ್‌ನ ಬುಡಕಟ್ಟು ಪ್ರದೇಶದಲ್ಲಿ ಆರಂಭವಾಗಬೇಕಿದ್ದ ‘ನೆತರ್‌ಹಾಟ್ ಫೀಲ್ಡ್‌ ಫೀರಿಂಗ್ ರೇಂಜ್‌’ ಯೋಜನೆಯನ್ನು ವಿರೋಧಿಸಿ ಸ್ಥಳೀಯರು ನಡೆಸಿದ್ದ ಪ್ರತಿಭಟನೆ   

ರಾಂಚಿ: ಅಯೋಧ್ಯೆ ರಾಮ ಮಂದಿರ, 370ನೇ ವಿಧಿ, ಪೌರತ್ವ (ತಿದ್ದುಪಡಿ) ಕಾಯ್ದೆ... ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಭಾಷಣಗಳಲ್ಲಿ ಕೇಳಿಬರುತ್ತಿದ್ದ ವಿಷಯಗಳಿವು.

ಆದರೆ ಉದ್ಯೋಗ ನಷ್ಟ, ನಿರುದ್ಯೋಗ, ಭೂ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪಗಳು ಸ್ಥಳೀಯ ಮಟ್ಟದಲ್ಲಿ ಚರ್ಚೆಯ ವಿಷಯಗಳಾಗಿದ್ದವು. ಇದನ್ನು ಅರಿತುಕೊಳ್ಳದೆ, ಭಾವನಾತ್ಮಕ ವಿಷಯಗಳತ್ತ ಗಮನ ಹರಿಸಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

‘370ನೇ ವಿಧಿ ಇಟ್ಟುಕೊಂಡು ನಾವು ಮಾಡುವುದೇನು? ಅದರಿಂದ ನಮಗೆ ನೌಕರಿ ಸಿಗುತ್ತಾ? ಜಾರ್ಖಂಡ್‌ನಲ್ಲಿ 700 ಕಾರ್ಖಾನೆಗಳು ಮುಚ್ಚಿರುವಾಗ, ಎಲ್ಲೋ ಮಂದಿರ ನಿರ್ಮಿಸುವುದರಿಂದ ನಮಗೇನು ಲಾಭ’ ಚುನಾವಣಾ ಸಂದರ್ಭದಲ್ಲಿ ಸಮೀಕ್ಷೆಗೆ ಹೋಗಿದ್ದ ‘ಪ್ರಜಾವಾಣಿ’ ಪ್ರತಿನಿಧಿಗೆ ಮತದಾರರೊಬ್ಬರು ಕೇಳಿದ್ದ ಪ್ರಶ್ನೆಗಳಿವು.

ADVERTISEMENT

ಬಿಜೆಪಿ ಸರ್ಕಾರವು ಬುಡಕಟ್ಟು ಜನರ ಹಕ್ಕುಗಳಿಗೆ ಮಾರಕವಾಗುವ ನೀತಿಗಳನ್ನು ಜಾರಿಗೆ ತಂದಿತು.2016ರಲ್ಲಿ ದಾಸ್ ಸರ್ಕಾರವು ಛೋಟಾನಾಗಪುರ ಮತ್ತು ಸಂತಾಲ್ ಟೆನೆನ್ಸಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಇರಿಸಿತು. ಬುಡಕಟ್ಟು ಪ್ರದೇಶದ ಜಮೀನನ್ನು ರಸ್ತೆ, ಕಾಲುವೆ, ಆಸ್ಪತ್ರೆ ಸೇರಿದಂತೆ ರಾಜ್ಯ ಸರ್ಕಾರದ ಯೋಜನೆಗಳಿಗೆ ಬಳಸುವ ಪ್ರಸ್ತಾವ ಈ ತಿದ್ದುಪಡಿಯಲ್ಲಿತ್ತು.

ಈ ಮಸೂದೆ ಅಂಗೀಕಾರವಾದರೂ, ರಾಜ್ಯಪಾಲರು ತಿರಸ್ಕರಿಸಿದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಬುಡಕಟ್ಟು ಜನರಲ್ಲಿ ಆವರಿಸಿತ್ತು. ಬುಡಕಟ್ಟು ಜನರ ಈ ಕಳವಳವನ್ನು ಚುನಾವಣೆವರೆಗೂ ಕಾಯ್ದುಕೊಳ್ಳುವಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ಸಫಲವಾದವು.

ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸರಯೂ ರಾಯ್ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿದ್ದರು. ಇದನ್ನು ಮೋದಿ ಕಡೆಗಣಿಸಿದರು. ಈ ಚುನಾವಣೆಯಲ್ಲಿ ರಾಯ್ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು. ಭ್ರಷ್ಟಾಚಾರದ ಆರೋಪವನ್ನು ಕಡೆಗಣಿಸಿದ್ದು ಬಿಜೆಪಿ ಸೋಲಿಗೆ ಮತ್ತೊಂದು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.