ಮುಂಬೈ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರನಡೆದ ಹಿಂಸಾಚಾರ ವಿರೋಧಿಸಿ ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಆವರಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ 'ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿ' ಎಂಬ ಪೋಸ್ಟರ್ ಪ್ರದರ್ಶಿಸಲಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಕುರಿತ ವಿಡಿಯೊ ಈಗ ವೈರಲ್ ಆಗಿದೆ.
"ಸೋಮವಾರ ರಾತ್ರಿ ನಡೆದ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ್' ಎಂಬ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಡಿಸಿಪಿ ಸಂಗ್ರಾಮಸಿಂಗ್ ನಿಷಂದರ್ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು "ಕಾಶ್ಮೀರ ಸ್ವತಂತ್ರವಾಗಲಿ" ಎಂದು ಬರೆದಿದ್ದ ಫಲಕ ಹಿಡಿದಿದ್ದಳು. ಜತೆಗೆ, ಆಕ್ಷೇಪಾರ್ಹ ಮತ್ತು ನಿಂದನಾತ್ಮಕವಾಗಿ ಬರೆದ ಇತರ ಹಲವಾರು ಫಲಕಗಳನ್ನೂ ಪ್ರತಿಭಟನಾಕಾರರು ಹಿಡಿದುಕೊಂಡಿದ್ದರು.
ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದುದರಿಂದ ಮಂಗಳವಾರ ಬೆಳಿಗ್ಗೆ ಮುಂಬೈ ಪೊಲೀಸರು ಪ್ರತಿಭಟನಾಕಾರರನ್ನು ಗೇಟ್‌ವೇ ಆಫ್ ಇಂಡಿಯಾದಿಂದ ನೀರು, ಶೌಚಾಲಯ ಮುಂತಾದ ಹೆಚ್ಚುವರಿ ಸೌಕರ್ಯಗಳಿರುವ ಆಜಾದ್ ಮೈದಾನಕ್ಕೆ ಸ್ಥಳಾಂತರಿಸಿದ್ದರು. ಶಾಂತಿಯುತವಾಗಿ ನಡೆಸುವ ಯಾವುದೇ ಪ್ರತಿಭಟನೆಗಳಿಗೆ ನಮ್ಮ ಅಭ್ಯಂತರ ಇಲ್ಲ ಎಂದು ಡಿಸಿಪಿ ಹೇಳಿದ್ದಾರೆ.
ಆದರೆ, ಆಜಾದ್ ಮೈದಾನದಲ್ಲಿ ನಮ್ಮನ್ನು ಬಂಧನದಲ್ಲಿಡಲಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. "ನಾವು ಇಲ್ಲಿ ಮುಕ್ತವಾಗಿ ಓಡಾಡುವಂತಿಲ್ಲ. ಗೇಟಿನಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ ಪೊಲೀಸರು ತಡೆದರು. ನಮ್ಮನ್ನು ಇಲ್ಲಿ ಬಂಧನದಲ್ಲಿಡಲಾಗಿದೆ" ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
ಬಿಜೆಪಿ ಕೆಂಡ
ಈ ಕುರಿತಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಕೆಂಡ ಕಾರಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್, "ನಿಜಕ್ಕೂ ಪ್ರತಿಭಟನೆ ನಡೆಯುತ್ತಿರುವುದು ಯಾತಕ್ಕಾಗಿ? ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆಯಬೇಕೆಂಬ ಸ್ಲೋಗನ್ ಯಾಕಾಗಿ? ಇಂತಹ "ಪ್ರತ್ಯೇಕತಾವಾದಿಗಳನ್ನು" ಮುಂಬೈನಲ್ಲಿ ನಾವು ಸಹಿಸಿಕೊಳ್ಳುವುದಾದರೂ ಹೇಗೆ? ಮುಖ್ಯಮಂತ್ರಿ ಕಚೇರಿಯಿಂದ ಕೇವಲ 2 ಕಿ.ಮೀ. ದೂರದಲ್ಲೇ ಆಜಾದಿ ಗ್ಯಾಂಗ್‌ನ ಈ ರೀತಿಯ ಸ್ಲೋಗನ್‌ಗಳು. ಉದ್ಧವ್‌ಜೀ, ನಿಮ್ಮ ಮೂಗಿನಡಿಯಲ್ಲೇ ಭಾರತ ವಿರೋಧಿ ಆಂದೋಲನವನ್ನು ನೀವು ಸಹಿಸಿಕೊಳ್ಳುತ್ತೀರಾ" ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್ ಮಾಡಿದ್ದು, "ಭಾರತದ ಯುವಜನರೇ, ಈಗ ನಡೆಯುತ್ತಿರುವ ಪ್ರತಿಭಟನೆಗಳು ನಿಜಕ್ಕೂ ಭಾರತವನ್ನು ವಿಭಜಿಸುವುದರತ್ತ ಹೊರಳುತ್ತಿದೆ ಎಂಬುದನ್ನು ನೀವು ನೋಡುತ್ತಿಲ್ಲವೇ? ನಿಮ್ಮ ಉತ್ತರದಲ್ಲಿ 'ಆದರೆ' ಎಂಬ ಪದವಿದ್ದರೆ, ಮತ್ತೊಮ್ಮೆ ಯೋಚಿಸಿ" ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.