ADVERTISEMENT

ಲಾಕ್‌ಡೌನ್‌: ದೆಹಲಿ ಸರ್ಕಾರದಿಂದ ನಿತ್ಯ 15 ಲಕ್ಷ ಜನರಿಗೆ ಉಚಿತ ಊಟ

ಲಾಕ್‌ಡೌನ್‌ನಿಂದ ಎದುರಾದ ಸಮಸ್ಯೆ ನೀಗಿಸಲು ಕ್ರಮ

ಸಿದ್ದಯ್ಯ ಹಿರೇಮಠ
Published 10 ಏಪ್ರಿಲ್ 2020, 20:15 IST
Last Updated 10 ಏಪ್ರಿಲ್ 2020, 20:15 IST
ಲಾಕ್‌ಡೌನ್‌ನಿಂದಾಗಿ ಸಮಸ್ಯೆ ಎದುರಿಸುತ್ತಿರುವವರಿಗಾಗಿ ದೆಹಲಿಯಲ್ಲಿ ನಿತ್ಯ ಊಟದ ವ್ಯವಸ್ಥೆ ಮಾಡಲಾಗಿದೆ
ಲಾಕ್‌ಡೌನ್‌ನಿಂದಾಗಿ ಸಮಸ್ಯೆ ಎದುರಿಸುತ್ತಿರುವವರಿಗಾಗಿ ದೆಹಲಿಯಲ್ಲಿ ನಿತ್ಯ ಊಟದ ವ್ಯವಸ್ಥೆ ಮಾಡಲಾಗಿದೆ   

ನವದೆಹಲಿ: ಕೊರೊನಾ ನಿಯಂತ್ರಿಸುವ ಸಲುವಾಗಿ ಘೋಷಿಸಲಾದ ಲಾಕ್‌ಡೌನ್‌ನಿಂದ ಸಮಸ್ಯೆಗೆ ಒಳಗಾದವರಿಗೆ ನೆರವಾಗುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಆರಂಭಿಸಿರುವ ಉಚಿತ ಆಹಾರ ಪೂರೈಕೆ ವ್ಯವಸ್ಥೆಯಿಂದ ನಿತ್ಯವೂ 15 ಲಕ್ಷ ಜನ ಪ್ರಯೋಜನ ಪಡೆಯುತ್ತಿದ್ದಾರೆ.

ದಿನಗೂಲಿಯನ್ನೇ ನಂಬಿರುವ ಕೊಳೆಗೇರಿ ವಾಸಿಗಳು, ದುಡಿಮೆ ಇಲ್ಲದಂತಾಗಿರುವ ವಲಸೆ ಕಾರ್ಮಿಕರು ಹಾಗೂ ವಿವಿಧೆಡೆಯಿಂದ ಬಂದು ಹಾಸ್ಟೆಲ್‌ ಮತ್ತು ಬಾಡಿಗೆ ಮನೆಗಳಲ್ಲಿ ಇರುವ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ.

ದೆಹಲಿಯ 400 ಸರ್ಕಾರಿ ಶಾಲೆಗಳಲ್ಲಿ ಮಾರ್ಚ್‌ 29ರಿಂದಲೇ ನಿತ್ಯ ಎರಡು ಹೊತ್ತು ಊಟದ ವ್ಯವಸ್ಥೆ ಕಲ್ಪಿಸುವ ಕೇಂದ್ರ ತೆರೆಯಲಾಗಿದೆ. ಬಡ ಕುಟುಂಬಗಳು ಆಹಾರವನ್ನು ಮನೆಗೆ ಒಯ್ದರೆ, ಸಾವಿರಾರು ಜನ ಸ್ಥಳದಲ್ಲೇ ಊಟ ಮಾಡುತ್ತಿದ್ದಾರೆ.

ADVERTISEMENT

ಅನ್ನ, ಸಾರು, ಚೋಲೆ (ಕಡಲೆಕಾಳು ಪಲ್ಯ) ಹಾಗೂ ಕಿಚಡಿ ಸಿದ್ಧಪಡಿಸಿ ಮಧ್ಯಾಹ್ನ 12ರೊಳಗೆ ಮತ್ತು ಸಂಜೆ 6.30ರೊಳಗೆ ಶಾಲೆಗಳಿಗೆ ತಲುಪಿಸಲಾಗುತ್ತಿದೆ. ಅಲ್ಲದೆ, ಬಡವರೇ ವಾಸಿಸುತ್ತಿರುವ ಕೆಲವು ಪ್ರದೇಶಗಳಲ್ಲಿ ರಸ್ತೆಯ ಬದಿಯಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಲಾಕ್‌ಡೌನ್‌ ಘೋಷಣೆಯಾದ 5 ದಿನಗಳ ನಂತರ ಈ ವ್ಯವಸ್ಥೆ ಆರಂಭಿಸಲಾಗಿದೆ. ಏಪ್ರಿಲ್‌ 6ರವರೆಗೆ ನಿತ್ಯ 4ರಿಂದ 7 ಲಕ್ಷ ಜನ ಸೌಲಭ್ಯದ ಲಾಭ ಪಡೆದರೆ, ಏಪ್ರಿಲ್‌ 2ನೇ ವಾರದಿಂದ 15 ಲಕ್ಷದಷ್ಟು ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.

‘ಅನ್ನಾಮೃತ’ ಪ್ರತಿಷ್ಠಾನಕ್ಕೆ ಅಡುಗೆ ಸಿದ್ಧಪಡಿಸಿ ಜನರಿಗೆ ವಿತರಿಸುವ ಜವಾಬ್ದಾರಿ ನೀಡಲಾಗಿದ್ದು, ಗೃಹ ರಕ್ಷಕ ದಳದ ಮಾದರಿಯ ದೆಹಲಿ ನಾಗರಿಕ ಸುರಕ್ಷಾ ಪಡೆಯ (ಡಿಸಿಡಿ) ಸಿಬ್ಬಂದಿ ಊಟ ಬಡಿಸುವ ಮತ್ತು ಜನರಿಗೆ ಕೊರೊನಾ ಸೋಂಕಿನ ಕುರಿತು ಅರಿವು ಮೂಡಿಸಿ, ನಿಯಂತ್ರಿಸುವ ಕಾರ್ಯಕ್ಕೆ ನಿಯುಕ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.