ADVERTISEMENT

ಕೇರಳ: ಗ್ರಾಮ ಪಂಚಾಯಿತಿ ಕಸ ಗುಡಿಸುತ್ತಿದ್ದ ಆನಂದವಲ್ಲಿ ಈಗ ಅಲ್ಲೇ ಅಧ್ಯಕ್ಷೆ!

‘ಇಂಥ ಹುದ್ದೆ ಅಲಂಕರಿಸುತ್ತೇನೆಂದು ಕನಸಲ್ಲೂ ಎಣಿಸಿರಲಿಲ್ಲ‘

ಪಿಟಿಐ
Published 1 ಜನವರಿ 2021, 11:08 IST
Last Updated 1 ಜನವರಿ 2021, 11:08 IST
ಆನಂದವಲ್ಲಿ
ಆನಂದವಲ್ಲಿ   

ಕೊಲ್ಲಂ (ಕೇರಳ): ‘ಇಂಥ ಹುದ್ದೆಯನ್ನು ಅಲಂಕರಿಸುತ್ತೇನೆಂದು ಎಂದೂ ಯೋಚಿಸಿರಲಿಲ್ಲ. ಅದೂ, ಅರೆ ಕಾಲಿಕ ಕಸಗುಡಿಸುವ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನಾನು ಮುಖ್ಯಸ್ಥೆಯಾಗುತ್ತೇನೆಂದು ಕನಸೂ ಕಂಡಿರಲಿಲ್ಲ...

ತಾನು ಕಸ ಗುಡಿಸುತ್ತಿದ್ದ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಪತ್ತನಾಪುರಂ ಕ್ಷೇತ್ರದ ಆನಂದವಲ್ಲಿಯವರ ಅಚ್ಚರಿಯ ನುಡಿ ಇದು.

ಸಿಪಿಐ(ಎಂ) ಸದಸ್ಯೆಯಾಗಿರುವ ಆನಂದವಲ್ಲಿ (46), ಪರಿಶಿಷ್ಟ ಜಾತಿಯವರು.

ADVERTISEMENT

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆನಂದವಲ್ಲಿಯವರು ಪತ್ತನಾಪುರಂ ಬ್ಲಾಕ್‌ ಪಂಚಾಯಿತಿಗೆ ತಲವೂರು ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದರು.

ಪತ್ತನಾಪುರಂ ಬ್ಲಾಕ್‌ನಲ್ಲಿ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಪಕ್ಷ 7 ಸ್ಥಾನಗಳನ್ನು ಪಡೆದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದ ಕಾರಣ, ಪಕ್ಷ ಆನಂದವಲ್ಲಿ ಅವರ ಹೆಸರನ್ನು ಸೂಚಿಸಿತು.

ಪಂಚಾಯಿತಿಯಲ್ಲಿ ನಡೆದ ನೂತನ ಸದಸ್ಯರ ಸಭೆಯಲ್ಲಿ ಆನಂದವಲ್ಲಿಯವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಡಿಸೆಂಬರ್ 30ರಂದು ಅವರು ಅಧಿಕಾರ ಸ್ವೀಕರಿಸಿದರು. ಅವರ ಪತಿ ಮೋಹನ್ ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾಗಿದ್ದಾರೆ.

ಆನಂದವಲ್ಲಿಯವರು 2011 ಪತ್ತನಾಪುರಂ ಬ್ಲಾಕ್ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಕಸಗುಡಿಸುವ ಕೆಲಸಕ್ಕೆ ಸೇರಿದ್ದಾಗ, ಮುಂದೊಂದು ದಿನ ಇದೇ ಕಚೇರಿಗೆ ಅಧ್ಯಕ್ಷೆಯಾಗುತ್ತೇನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಆಗ ಅವರಿಗೆ ತಿಂಗಳಿಗೆ ₹2ಸಾವಿರ ವೇತನವಿತ್ತು. 2017ರ ನಂತರ ವೇತನ ಪರಿಷ್ಕರಣೆಯಾಗಿ ₹6ಸಾವಿರಕ್ಕೆ ಹೆಚ್ಚಿಸಲಾಗಿತ್ತು.

ಕಳೆದವಾರದವರೆಗೂ ಆನಂದವಲ್ಲಿ, ಇದೇ ಬ್ಲಾಕ್‌ನ ಪಂಚಾಯ್ತಿ ಕಚೇರಿಯ ಅಧಿಕಾರಿಗಳಿಗೆ ಚಹಾ ಪೂರೈಸುತ್ತಿದ್ದರು. ‘ನಾನು ಈ ಹುದ್ದೆಗೆ ಏರಿದ್ದಕ್ಕೆ ಅಧಿಕಾರಿಗಳೆಲ್ಲ ಸಂತೋಷಪಟ್ಟಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸಲು ಹಿಂಜರಿಯುತ್ತಿದ್ದಾಗ, ಇವರೆಲ್ಲರೂ ನನ್ನನ್ನು ಪ್ರೋತ್ಸಾಹಿಸಿದ್ದರು. ಅವರ ಮನವೊಲಿಕೆಯಿಂದಾಗಿ ನಾನು ಚುನಾವಣೆಗೆ ಸ್ಪರ್ಧಿಸಿದೆ. ಎಲ್ಲರೂ ಬೆಂಬಲಿಸಿದ್ದರಿಂದ ನಾನು ಗೆಲ್ಲಲು ಸಾಧ್ಯವಾಯಿತು‘ ಎಂದು ಆನಂದವಲ್ಲಿ ಹೇಳಿದರು.

ದ್ವಿತೀಯ ಪಿಯುಸಿವರೆಗೂ ಓದಿರುವ, ಎರಡು ಮಕ್ಕಳ ತಾಯಿ ಆನಂದವಲ್ಲಿಯವರು, ಪಂಚಾಯಿತಿಯಲ್ಲಿ ಕಸ ಗುಡಿಸುವ ಜತೆಗೆ, ಅಟೆಂಡರ್‌ ಆಗಿಯೂ ಕೆಲಸ ಮಾಡಿದ್ದಾರೆ. ‘ನಾನು, ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳಿಗೆ ಚಹಾ ಪೂರೈಸುವಾಗ, ಪಂಚಾಯಿತಿಯಲ್ಲಿ ನಡೆಯುತ್ತಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸುತ್ತಿದ್ದೆ. ಸಭೆಯಲ್ಲಿ ಚರ್ಚೆಯಾಗುತ್ತಿದ್ದ ಅಂಶಗಳನ್ನು ‌ತಿಳಿದುಕೊಂಡಿ ದ್ದೇನೆ. ಮುಂದೆ ಎಲ್ಲವನ್ನೂ ಅಧ್ಯಯನ ಮಾಡುತ್ತೇನೆ. ಆಡಳಿತದ ಮೂಲಭೂತ ಅಂಶಗಳನ್ನು ಆಧರಿಸಿ ಜನರಿಗೆ ಉತ್ತಮ ಸೇವೆ ನೀಡುತ್ತೇನೆ‘ ‌ಎಂದು ಆನಂದವಲ್ಲಿ ಭರವಸೆ ನೀಡಿದರು.

‘ನಿಮ್ಮ ಗೆಲುವಿನ ಬಗ್ಗೆ,‌ ಕುಟುಂಬ, ಹಳ್ಳಿಯವರ ಪ್ರತಿಕ್ರಿಯೆ ಹೇಗಿದೆ‘ ಎಂದು ಆನಂದವಲ್ಲಿವಯರನ್ನು ಕೇಳಿದರೆ, ‘ನಮ್ಮ ಕುಟುಂಬದವರು, ಊರಿನವರೆಲ್ಲರೂ ಖುಷಿ ಪಟ್ಟಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿ ಕೆಲಸ ಮಾಡುತ್ತೇನೆ‘ ಎಂದು ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.