ADVERTISEMENT

ತಿರುಪತಿಯ ಪಾವಿತ್ರ್ಯ ಕಾಪಾಡಿ: ಸಿ.ಎಂಗೆ ಭಕ್ತರ ಮನವಿ

ಎಸ್‌ವಿಬಿಸಿ ಮುಖ್ಯಸ್ಥರ ಆಡಿಯೊ ವಿವಾದ:

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 19:20 IST
Last Updated 13 ಜನವರಿ 2020, 19:20 IST

ಹೈದರಾಬಾದ್‌: ‘ಶ್ರೀ ವೆಂಕಟೇಶ್ವರ ಭಕ್ತಿ’ ಟಿ.ವಿ ವಾಹಿನಿ (ಎಸ್‌ವಿಬಿಸಿ) ಮುಖ್ಯಸ್ಥ ಬಲಿರೆಡ್ಡಿ ಪೃಥ್ವಿರಾಜ್‌ ಅವರ ಆಡಿಯೊ ಪ್ರಕರಣದಿಂದ ಆಕ್ರೋಶಗೊಂಡಿರುವ ಭಕ್ತರು,ಸಚ್ಚಾರಿತ್ರ್ಯ ಹೊಂದಿರುವ ಉತ್ತಮ ವ್ಯಕ್ತಿಯನ್ನು ಮುಖ್ಯಸ್ಥ ಸ್ಥಾನಕ್ಕೆ ನೇಮಿಸಿ ತಿರುಪತಿಯಪಾವಿತ್ರ್ಯ ಕಾಪಾಡಬೇಕು ಎಂದು ಆಂಧ್ರಪ್ರದೇಶ ಸರ್ಕಾರ ಮತ್ತು ತಿರುಮಲತಿರುಪತಿ ಟ್ರಸ್ಟ್‌ಗೆ ಒತ್ತಾಯಿಸಿದ್ದಾರೆ.

ವೈಎಸ್‌ಆರ್‌ಪಿ ಪಕ್ಷದ ಬೆಂಬಲಿಗರಾದ ಹಾಸ್ಯನಟ ಪೃಥ್ವಿರಾಜ್‌ ಅವರನ್ನು ಕಳೆದ ಜುಲೈನಲ್ಲಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ಟಿ.ವಿ ವಾಹಿನಿಯ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಇದೀಗ ಪೃಥ್ವಿರೆಡ್ಡಿ ಅವರು ವಾಹಿನಿಯ ಮಹಿಳಾ ಸಹದ್ಯೋಗಿ ಜೊತೆ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಅವರದ್ದು ಎನ್ನಲಾದ ಆಡಿಯೊ ವೈರಲ್‌ ಆಗಿದೆ. ‌

ಈ ಪ್ರಕರಣದ ಹಿನ್ನೆಲೆಯಲ್ಲಿ ಜಗನ್‌ ಅವರು ಪೃಥ್ವಿರೆಡ್ಡಿ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅವರು ಪೃಥ್ವಿರೆಡ್ಡಿ ಅವರಿಂದ ರಾಜೀನಾಮೆಯನ್ನು ಪಡೆದಿದ್ದಾರೆ.

ADVERTISEMENT

‘ಜಗನ್‌ ಅವರು ತಮ್ಮ ಪಕ್ಷದ ಬೆಂಬಲಿಗರನ್ನೇ ಹುದ್ದೆಗಳಿಗೆ ನೇಮಿಸಲಿ. ಆದರೆ, ಧಾರ್ಮಿಕ ಕ್ಷೇತ್ರದ ಹುದ್ದೆಗಳಿಗೆನೇಮಕ ಮಾಡುವಾಗ ಸಚ್ಚಾರಿತ್ರ್ಯ ಗುಣವುಳ್ಳ ಅರ್ಹ ವ್ಯಕ್ತಿಯನ್ನು ಆರಿಸಬೇಕು’ ಎಂದು ಹಿಂದೂ ದೇವಾಲಯಗಳ ರಕ್ಷಣಾ ಸಮಿತಿಯ ಪ್ರೊ.ಡಿಎಆರ್ ಸುಬ್ರಹ್ಮಣ್ಯಮ್‌ ಸಲಹೆ ನೀಡಿದ್ದಾರೆ.‌

‘ಗೌರವಾನ್ವಿತ ವ್ಯಕ್ತಿಗಳನ್ನು ಹುದ್ದೆಗೆ ನೇಮಿಸುವಂತೆ ಜಗನ್‌ ಅವರನ್ನು ಒತ್ತಾಯಿಸಲು ಅಂಚೆಪತ್ರಗಳ ಅಭಿಯಾನವನ್ನು ಆರಂಭಿಸಿದ್ದೇವೆ’ ಎಂದು‍ಪ್ರೊ.ಡಿಎಆರ್ ಸುಬ್ರಹ್ಮಣ್ಯಮ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಆರೋಪಿ ಪೃಥ್ವಿರಾಜ್‌ ಅವರು ಆಡಿಯೊದಲ್ಲಿರುವ ಧ್ವನಿ ತಮ್ಮದಲ್ಲ ಎಂದಿದ್ದಾರೆ. ತನಿಖೆ ನಂತರ ಎಸ್‌ವಿಬಿಸಿ ಟಿ.ವಿ.ಗೆ ಮತ್ತೆ ಬರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ತಮ್ಮ ಮೇಲಿನ ಆರೋಪ ಸಾಬೀತಾದರೆ ಯಾವುದೇ ಶಿಕ್ಷೆ ಎದುರಿಸಲು ಸಿದ್ಧ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಆಡಿಯೊ ಬಿಡುಗಡೆ ಮಾಡಿರುವ ‘ಎಸ್‌ವಿಬಿಸಿ’ ನೌಕರರ ಸಂಘದ ಅಧ್ಯಕ್ಷ ಕಂದರಪು ಮುರುಳಿ ಮಾತನಾಡಿ, ‘ಪೃಥ್ವಿರಾಜ್‌ ಅವರು ಮಹಿಳಾ ಸಹದ್ಯೋಗಿಗಳಿಗೆ ಸಂಬಳ ಹೆಚ್ಚಳ, ಕಾಯಂ ಉದ್ಯೋಗದ ಆಮಿಷಗಳನ್ನು ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತು ಹಲವು ದೂರುಗಳು ಬಂದಿವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.