ಗಣೇಶೋತ್ಸವ
ಮುಂಬೈ: ಶತಮಾನದಷ್ಟು ಹಳೆಯದಾದ ‘ಸಾರ್ವಜನಿಕ ಗಣೇಶೋತ್ಸವ’ವನ್ನು ‘ಮಹಾರಾಷ್ಟ್ರ ರಾಜ್ಯದ ಉತ್ಸವ’ ಎಂದು ಮಹಾರಾಷ್ಟ್ರ ಸರ್ಕಾರ ಗುರುವಾರ ಘೋಷಣೆ ಮಾಡಿದೆ. ಈ ಉತ್ಸವದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸಲೂ ಸರ್ಕಾರ ಬದ್ಧವಾಗಿದೆ ಎಂದು ಪ್ರತಿಪಾದಿಸಿದೆ.
ವಿಧಾನಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ರಾಜ್ಯದ ಸಂಸ್ಕೃತಿ ಸಚಿವ ಆಶಿಷ್ ಶೆಲಾರ್, ‘ಗಣೇಶೋತ್ಸವವು ಕೇವಲ ಆಚರಣೆಯಷ್ಟೇ ಅಲ್ಲ, ಅದು ಮಹಾರಾಷ್ಟ್ರದ ಸಂಸ್ಕೃತಿಯ ಹೆಮ್ಮೆ ಮತ್ತು ಗುರುತಿನ ಸಂಕೇತವಾಗಿದೆ’ ಎಂದರು.
‘ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು 1893ರಲ್ಲಿ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಇದು ಸಾಮಾಜಿಕ ಏಕತೆ, ರಾಷ್ಟ್ರೀಯತೆ, ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ, ಆತ್ಮಗೌರವ ಮತ್ತು ನಮ್ಮ ಭಾಷೆಯ ಬಗ್ಗೆಗಿನ ಹೆಮ್ಮೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಅವರು ಹೆಳಿದರು.
ಗಣೇಶೋತ್ಸವದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಆಚರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಗಣೇಶೋತ್ಸವಕ್ಕೆ ಅಗತ್ಯ ಮೂಲಸೌಕರ್ಯ ಮತ್ತು ಪೊಲೀಸ್ ಭದ್ರತೆ ಒದಗಿಸಲಾಗುವುದು. ಅಲ್ಲದೆ ಪುಣೆ, ಮುಂಬೈ ಸೇರಿದಂತೆ ರಾಜ್ಯದ ನಗರಗಳಲ್ಲಿ ಅದ್ಧೂರಿ ಅಚರಣೆಗಳಿಗೆ ಆರ್ಥಿಕ ನೆರವನ್ನೂ ಸರ್ಕಾರ ನೀಡಲಿದೆ ಎಂದು ಸಚಿವರು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.