ADVERTISEMENT

ಉತ್ತರ ಪ್ರದೇಶ: ಗಂಗಾ ಎಕ್ಸ್‌ಪ್ರೆಸ್‌ವೇಗೆ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2021, 3:21 IST
Last Updated 18 ಡಿಸೆಂಬರ್ 2021, 3:21 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಲಖನೌ: ಉತ್ತರ ಪ್ರದೇಶದ ಅತಿ ಹೆಚ್ಚು ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಶಹಜಹಾನ್‌ಪುರದಲ್ಲಿ ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

₹36,200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 594 ಕಿ.ಮೀ. ಉದ್ದದ ಆರು ಪಥದ ಎಕ್ಸ್‌ಪ್ರೆಸ್‌ವೇ, ಉತ್ತರ ಪ್ರದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಲಿದೆ.

ದೇಶದಾದ್ಯಂತ ವೇಗದ ಸಂಪರ್ಕ ಜಾಲವನ್ನು ಒದಗಿಸುವ ಪ್ರಧಾನಿ ಮೋದಿ ಅವರ ದೂರದೃಷ್ಟಿ ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಹಿಂದಿನ ಪ್ರೇರಣೆಯಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ADVERTISEMENT

ಮೀರತ್‌ನಿಂದ ಪ್ರಯಾಗ್‌ರಾಜ್‌ಗೆ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ 12 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ರಾಜ್ಯದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಮೀರತ್‌ನ ಬಿಜೌಲಿ ಗ್ರಾಮದ ಬಳಿ ಪ್ರಾರಂಭವಾಗುವ ಎಕ್ಸ್‌ಪ್ರೆಸ್ ವೇ ಪ್ರಯಾಗ್‌ರಾಜ್‌ನ ಜುದಾಪುರ್ ದಂಡು ಗ್ರಾಮದ ವರೆಗೂ ವಿಸ್ತರಿಸುತ್ತದೆ. ಈ ಹೆದ್ದಾರಿಯು ಮೀರತ್, ಹಾಪುರ, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್‌ಪುರ, ಹರ್‌ದೋಯಿ, ಉನ್ನಾವೊ, ರಾಯ್ ಬರೇಲಿ, ಪ್ರತಾಪಗಢ ಮತ್ತು ಪ್ರಯಾಗರಾಜ್ ಮೂಲಕ ಹಾದು ಹೋಗುತ್ತದೆ.

ಶಹಜಹಾನ್‌ಪುರದ ಎಕ್ಸ್‌ಪ್ರೆಸ್ ವೇನಲ್ಲಿ ಭಾರತದ ವಾಯುಪಡೆಯ ವಿಮಾನಗಳಿಗೆ ತುರ್ತು ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಮಾಡಲು 3.5 ಕಿ.ಮೀ. ಉದ್ದದ ಏರ್-ಸ್ಟ್ರಿಪ್ ಕೂಡ ನಿರ್ಮಿಸಲಾಗುವುದು. ಎಕ್ಸ್‌ಪ್ರೆಸ್ ವೇ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ.

ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದ ಕೈಗಾರಿಕಾ ಅಭಿವೃದ್ಧಿ, ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಸೇರಿದಂತೆ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನವನ್ನು ನೀಡಲಿದೆ. ಕಾಮಗಾರಿ 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.