ADVERTISEMENT

ವಿಡಿಯೊದಲ್ಲಿ ಸೆರೆಯಾಯಿತು ಕುಖ್ಯಾತ ಗ್ಯಾಂಗ್‌ಸ್ಟರ್ ಶೂಟ್‌ಔಟ್ ಘಟನೆ

ದೆಹಲಿ ಪೊಲೀಸರ ಬಗ್ಗೆ ಪ್ರಶಂಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2021, 8:37 IST
Last Updated 25 ಸೆಪ್ಟೆಂಬರ್ 2021, 8:37 IST
ಶೂಟ್‌ಔಟ್ ಘಟನೆ
ಶೂಟ್‌ಔಟ್ ಘಟನೆ   

ನವದೆಹಲಿ: ದೆಹಲಿ ರೋಹಿಣಿ ಕೋರ್ಟ್‌ ಹಾಲ್‌ನಲ್ಲೇ ಶುಕ್ರವಾರ ಶೂಟೌಟ್ ನಡೆದು ಕುಖ್ಯಾತ ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿಯನ್ನು ವಕೀಲರ ವೇಷದಲ್ಲಿ ಬಂದ ಇಬ್ಬರು ವಿರೋಧಿ ಗುಂಪಿನವರು ಹತ್ಯೆ ಮಾಡಿದ್ದರು.

ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ತಲ್ಲಣವನ್ನೇ ಸೃಷ್ಟಿ ಮಾಡಿತ್ತು.ಘಟನೆಯಲ್ಲಿ ಗ್ಯಾಂಗ್‌ಸ್ಟರ್‌ಜಿತೇಂದ್ರ ಗೋಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಒಬ್ಬ ವಕೀಲೆ ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿಣಿ ಕೋರ್ಟ್‌ನ ಕೋರ್ಟ್ ಹಾಲ್‌ನಲ್ಲಿ ಗೋಗಿಯ ಮೇಲೆ ನಡೆದ ಶೂಟೌಟ್ ಹಾಗೂ ಪೊಲೀಸರ ಪ್ರತಿದಾಳಿಯನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.

ADVERTISEMENT

ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ಸುಮಾರು 30 ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿಯ ಮೇಲೆ ಟಿಳ್ಳು ಗ್ಯಾಂಗ್ ಸದಸ್ಯರು ಆಕ್ರಮಣ ಮಾಡಿದ್ದರು ಎನ್ನಲಾಗಿದೆ. ಕಳೆದ ವರ್ಷ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಗೋಗಿ, ಶುಕ್ರವಾರ ರೋಹಿಣಿ ಕೋರ್ಟ್‌ಗೆ ವಿಚಾರಣೆಗಾಗಿ ಬಂದಿದ್ದ.

ಜಿತೇಂದ್ರ ಗೋಗಿ

ಗೋಗಿ ಹಾಗೂ ಟಿಳ್ಳು ಗ್ಯಾಂಗ್ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು. ಒಂದು ವರ್ಷದಲ್ಲಿ ಈ ಗ್ಯಾಂಗ್‌ನ ಸುಮಾರು 25 ಜನ ಹೊಡೆದಾಟದಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ದಾಳಿಕೋರರು ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬಾತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ಹಿಡಿದುಕೊಟ್ಟವರಿಗೆ ₹50 ಸಾವಿರ ಬಹುಮಾನ ಘೋಷಣೆಯಾಗಿತ್ತು ಎಂದುದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ತಿಳಿಸಿದ್ದಾರೆ. ಇನ್ನು ದಾಳಿ ನಡೆಸಿದವರ ಮೇಲೆ ಕೂಡಲೇ ಪ್ರತಿದಾಳಿ ನಡೆಸಿದ ಪೊಲೀಸರ ಬಗ್ಗೆ ದೆಹಲಿಯಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.