ADVERTISEMENT

#gasleak | ಮುಂಬೈನಲ್ಲಿ ಅನಿಲ ಸೋರಿಕೆ ಆತಂಕ: ಸ್ಥಳಕ್ಕೆ ಧಾವಿಸಿದ ಫೈರ್ ಬ್ರಿಗೇಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2020, 2:17 IST
Last Updated 7 ಜೂನ್ 2020, 2:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈನ ವಿವಿಧ ಬಡಾವಣೆಗಳಲ್ಲಿ ಕೆಟ್ಟ ವಾಸನೆಯು ಅನುಭವಕ್ಕೆ ಬರುತ್ತಿದೆ. ಅನಿಲ ಸೋರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ನಾಗರಿಕರು ಮುಂಬೈ ನಗರಾಡಳಿಕ್ಕೆ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ #gasleak ಟ್ರೆಂಡಿಂಗ್ ಆಗಿದೆ.

ಅನಿಲ ಸೋರಿಕೆ ಬಗ್ಗೆ ಜನರು ಮಾಹಿತಿ ನೀಡಿರುವ ವಿಚಾರವನ್ನು ಮುಂಬೈ ಮಹಾನಗರಪಾಲಿಕೆ ಟ್ವೀಟ್ ಮೂಲಕ ದೃಢಪಡಿಸಿದೆ.

ಚೆಂಬೂರ್, ಘಾಟ್‌ಕೊಪರ್, ಕಂಜುನ್‌ಮಾರ್ಗ್, ವಿಖೊರ್ಲಿ ಮತ್ತು ಪೊವಯ್‌ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗಿವೆ. ಸ್ಥಳಕ್ಕೆ ತುರ್ತು ನಿರ್ವಹಣಾ ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಕೆಟ್ಟ ವಾಸನೆಯ ಮೂಲ ಪತ್ತೆಹಚ್ಚಲಿದ್ದಾರೆ. ಶೀಘ್ರ ಸರಿಯಾದ ಮಾಹಿತಿ ನೀಡಲಿದ್ದಾರೆ ಎಂದು ಬಿಎಂಸಿತಿಳಿಸಿದೆ.

ADVERTISEMENT

ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂಬೈ ನಿವಾಸಿಗಳು ಗಾಬರಿಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ 13 ಅಗ್ನಿಶಾಮಕ ಘಟಕಗಳನ್ನು ಸಕ್ರಿಯಗೊಳಿಸಲಾಗಿದೆ. ಬೆಳವಣಿಗೆಗಳನ್ನು ಅವಲೋಕಿಸುತ್ತಿವೆ. ಆರೋಗ್ಯ ಸಮಸ್ಯೆ ಕಂಡುಬಂದವರು ಒದ್ದೆ ಬಟ್ಟೆ ಅಥವಾ ಟವೆಲ್‌ನಿಂದ ಮುಖ ಮತ್ತು ಮೂಗು ಮುಚ್ಚಿಕೊಳ್ಳಬೇಕು ಎಂದು ಮುಂಬೈ ಪಾಲಿಕೆ ಟ್ವೀಟ್ ಮಾಡಿದೆ.

'ಜನರು ದೂರು ನೀಡಿದ ಎಲ್ಲ ಸ್ಥಳಗಳಲ್ಲಿಯೂ ತಪಾಸಣೆ ನಡೆಸಿದೆವು. ಅಂಧೇರಿ ಹೊರತುಪಡಿಸಿ, ಉಳಿದೆಡೆ ಕೆಟ್ಟ ವಾಸನೆ ಅನುಭವಕ್ಕೆ ಬರಲಿಲ್ಲ. ಅಂಧೇರಿಯಲ್ಲಿ ಕಾಣಿಸಿಕೊಂಡಿರುವ ಕೆಟ್ಟ ವಾಸನೆಯ ಮೂಲ ಯಾವುದು ಎಂಬುದನ್ನು ಪತ್ತೆ ಹೆಚ್ಚುವ ಕಾರ್ಯ ಚಾಲ್ತಿಯಲ್ಲಿದೆ' ಎಂಬ ಮುಂಬೈ ಫೈರ್ ಬ್ರಿಗೇಡ್‌ನ ಮುಖ್ಯ ಅಧಿಕಾರಿ ಪಿ.ಎಸ್.ರಹಂಗ್‌ದಾಳೆ ಅವರ ಹೇಳಿಕೆಯನ್ನು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

'ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಹಾಕಿದ್ದರೂ ಕೆಟ್ಟ ವಾಸನೆ ಬರುತ್ತಲೇ ಇದೆ. ತಲೆನೋವು ಬರುತ್ತಿದೆ' ಎಂದು ಹಲವು ನಿವಾಸಿಗಳು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.