ADVERTISEMENT

ಉತ್ತರ ಪ್ರದೇಶ: ಅನಿಲ ಸೋರಿಕೆಯಿಂದಾಗಿ ಇಬ್ಬರು ಸಾವು, 15 ಮಂದಿ ಆಸ್ಪತ್ರೆಗೆ

ಏಜೆನ್ಸೀಸ್
Published 23 ಡಿಸೆಂಬರ್ 2020, 4:34 IST
Last Updated 23 ಡಿಸೆಂಬರ್ 2020, 4:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋ-ಆಪರೇಟಿವ್ ಲಿಮಿಟೆಡ್ (ಐಎಫ್‌ಎಫ್‌ಸಿಒ) ಸ್ಥಾವರದಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಫೂಲ್‌ಪುರದಲ್ಲಿರುವ ಘಟಕದಲ್ಲಿ ಮಂಗಳವಾರ ರಾತ್ರಿ ಅನಾಹುತ ಸಂಭವಿಸಿದೆ ಎಂದು ಪ್ರಯಾಗ್‌ರಾಜ್ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ಬುಧವಾರ ಮಾಹಿತಿ ನೀಡಿದ್ದಾರೆ.

ಅಸ್ವಸ್ಥರಾಗಿರುವ 15 ಮಂದಿಯನ್ನು ಪ್ರಯಾಗ್‌ರಾಜ್‌ನ ಎಸ್‌ಆರ್‌ಎನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಘಟನೆಯಲ್ಲಿ ವಿಪಿ ಸಿಂಗ್ (47 ವರ್ಷ) ಮತ್ತು ಅಭಯ್ ನಂದನ್ (57 ವರ್ಷ) ಮೃತಪಟ್ಟಿದ್ದಾರೆ.

ಸ್ಥಾವರವನ್ನು ಸದ್ಯ ಮುಚ್ಚಲಾಗಿದ್ದು, ಅನಿಲ ಸೋರಿಕೆ ನಿಂತಿದೆ. ಅಲ್ಲದೆ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಗೋಸ್ವಾಮಿ ತಿಳಿಸಿದರು.

ADVERTISEMENT

ಈ ಘಟನೆಯ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟಕದಲ್ಲಿ ಅನಿಲ ಸೋರಿಕೆ ಹಿಂದಿನ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.