ADVERTISEMENT

ರಾಹುಲ್‌– ಗೆಹಲೋತ್‌ ಭೇಟಿ ಇಂದು

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 19:46 IST
Last Updated 23 ಆಗಸ್ಟ್ 2022, 19:46 IST
ಅಶೋಕ್‌ ಗೆಹಲೋತ್‌ 
ಅಶೋಕ್‌ ಗೆಹಲೋತ್‌    

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷ ಚುನಾವಣೆಯ ದಿನಾಂಕ ಘೋಷಣೆಗೆ 3– 4 ದಿನಗಳು ಬಾಕಿ ಇದ್ದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರನ್ನು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಭೇಟಿ ಆಗಲಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ರಾಹುಲ್ ಗಾಂಧಿ ಅವರು ಈ ಹಿಂದೆಯೇ ನಿರಾಕರಿಸಿದ್ದರು. ತಮ್ಮ ನಿರ್ಧಾರವನ್ನು ಬದಲಿಸಲು ಅವರು ಮತ್ತೆ ನಿರಾಕರಿಸಿದ್ದಾರೆ. ಹಾಗಾಗಿ ಗಾಂಧಿ ಕುಟುಂಬದ ಹೊರಗಿನವರು ಪಕ್ಷದ ಅಧ್ಯಕ್ಷರಾಗಬೇಕು ಅಥವಾ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಆ ಸ್ಥಾನದಲ್ಲಿ ಮುಂದುವರಿಯಬೇಕು. ಆದರೆ, ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಸೋನಿಯಾ ಅವರು ಹಿರಿಯ ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಗಾಂಧಿ ಕುಟುಂಬದವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದನ್ನು ನಿರಾಕರಿಸುತ್ತಿರುವ ಕಾರಣ ಅಶೋಕ್‌ ಗೆಹಲೋತ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬುದು ಕಾಂಗ್ರೆಸ್‌ನ ದೊಡ್ಡ ಗುಂಪೊಂದರ ಅಭಿಪ್ರಾಯವಾಗಿದೆ. ಗೆಹಲೋತ್‌ ಅವರು ಹಿರಿಯರು ಮತ್ತು ಕಾಂಗ್ರೆಸ್‌ನ ಬಹುತೇಕ ನಾಯಕರ ಬಂಬಲ ಅವರಿಗೆ ದೊರಕುತ್ತದೆ ಎಂಬುದೇ ಈ ಅಭಿಪ್ರಾಯಕ್ಕೆ ಕಾರಣ. ಆದರೆ ರಾಜಸ್ಥಾನದ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವುದರಿಂದ ಅವರು ರಾಜಸ್ಥಾನ ತೊರೆಯಲು ನಿರಾಕರಿಸುತ್ತಿದ್ದಾರೆ. ಇದಕ್ಕೂ ಮೊದಲು ಎರಡು ಬಾರಿ ಅವರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಕೋರಲಾಗಿತ್ತು. ಆದರೆ ಅವರು ದೆಹಲಿಗೆ ಬರಲು ಆಸಕ್ತಿ ತೋರಿರಲಿಲ್ಲ. ಜೊತೆಗೆ, ರಾಜಸ್ಥಾನ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರ ಜೊತೆಗಿನ ಬಣ ಕಿತ್ತಾಟ ಅವರಿಗೆ ಬೇಸರ ತರಿಸಿದ್ದೂ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗದೇ ಇದ್ದರೆ ಕಾಂಗ್ರೆಸ್ಸಿಗರಿಗೆ ನಿರಾಶೆ ಆಗುತ್ತದೆ. ಪಕ್ಷದ ಅಧ್ಯಕ್ಷರಾಗಲುಅವರಿಗೆ ಅವಿರೋಧವಾಗಿ ಬೆಂಬಲ ವ್ಯಕ್ತವಾಗಿದೆ. ಆದ್ದರಿಂದ ಅವರು ಹುದ್ದೆಯನ್ನು ವಹಿಸಿಕೊಳ್ಳಬೇಕು’ ಎಂದು ಗೆಹಲೋತ್‌ ಅವರು ಸೋಮವಾರವಷ್ಟೇ ಹೇಳಿದ್ದರು. ರಾಹುಲ್‌ ಜೊತೆಗಿನ ಸಭೆ ವೇಳೆಯೂ ಅವರು ತಮ್ಮ ನಿರ್ಧಾರಕ್ಕೆ ಅಂಟಿಕೊಳ್ಳುವ ನಿರೀಕ್ಷೆ ಇದೆ. ಆದರೆ, ರಾಹುಲ್‌ ಅವರು ಗೆಹಲೋತ್‌ರ ಮನವೊಲಿಸಲು ಪ್ರಯತ್ನಿಸಲಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯ ಮುಕುಲ್‌ ವಾಸ್ನಿಕ್‌, ಲೋಕಸಭೆ ಮಾಜಿ ಸ್ವೀಕರ್‌ ಮೀರಾ ಕುಮಾರ್‌ ಮತ್ತು ಮಾಜಿ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂದೆ ಅವರ ಹೆಸರುಗಳೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.