
ನವದೆಹಲಿ: ವಾಯುವಿನ ಗುಣಮಟ್ಟ ಉತ್ತಮವಾಗಿರುವ ದೇಶದ 10 ನಗರಗಳ ಪಟ್ಟಿಯಲ್ಲಿ ರಾಜ್ಯದ ಮೈಸೂರು, ಕೊಪ್ಪಳ, ಚಿಕ್ಕಮಗಳೂರು, ಯಾದಗಿರಿ, ಚಾಮರಾಜನಗರ, ವಿಜಯಪುರ ಸೇರಿ 6 ನಗರಗಳು ಸ್ಥಾನ ಪಡೆದಿವೆ.
ಇಂಧನ ಮತ್ತು ಶುದ್ಧ ವಾಯು ಸಂಶೋಧನಾ ಕೇಂದ್ರವು (ಸಿಆರ್‌ಇಎ) ಈ ಅಧ್ಯಯನ ನಡೆಸಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಭಾರತದಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರ. ನವೆಂಬರ್ ತಿಂಗಳಲ್ಲಿ ಗಾಜಿಯಾಬಾದ್‌ನ ಮಾಲಿನ್ಯ ಪ್ರಮಾಣವು ರಾಷ್ಟ್ರೀಯ ಸರಾಸರಿಯನ್ನೂ ಮೀರಿ ಏರಿಕೆ ಕಂಡಿದೆ ಎಂದು ಈ ವರದಿ ಹೇಳಿದೆ.
ದೇಶದಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ 10 ನಗರಗಳ ಪಟ್ಟಿಯಲ್ಲಿ ನೋಯ್ಡಾ, ಬಹದ್ದೂರ್‌ಗಢ, ದೆಹಲಿ, ಹಾಪುರ್, ಗ್ರೇಟರ್ ನೋಯ್ಡಾ, ಬಾಗ್ಪತ್, ಸೋನಿಪತ್, ಮೀರತ್ ಮತ್ತು ರೋಹಟಕ್ ಸೇರಿವೆ. ಮಾಲಿನ್ಯ ನಗರಗಳ ಪಟ್ಟಿಯಲ್ಲಿ ದೆಹಲಿ ನಾಲ್ಕನೆಯ ಸ್ಥಾನದಲ್ಲಿದೆ.
ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ 6 ನಗರಗಳು ಉತ್ತರ ಪ್ರದೇಶಕ್ಕೆ ಮತ್ತು ಮೂರು ನಗರಗಳು ಹರಿಯಾಣಕ್ಕೆ ಸೇರಿವೆ. ಈ ನಗರಗಳಲ್ಲಿ ವಾಯುವಿನ ಗುಣಮಟ್ಟವು ಅಪಾಯಕಾರಿ ಹಂತಕ್ಕೆ (ಪಿಎಂ2.5) ತಲುಪಿದೆ ಎಂದು ಸಿಆರ್‌ಇಎ ಹೇಳಿದೆ.
ಅತಿ ಹೆಚ್ಚು ಮಾಲಿನ್ಯ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದ್ದರೆ, ಶುದ್ಧ ವಾಯು– ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮೇಘಾಲಯದ ಶಿಲ್ಲಾಂಗ್ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.