ADVERTISEMENT

‘ಶಾಲೆ ತಪ್ಪಿಸುವ ಮಗುವಿನಂತೆ ಗಿರಿರಾಜ್ ಹಟ’

ಬೇಗುಸರಾಯ್‌ನಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದಕ್ಕೆ ಕನ್ಹಯ್ಯಾ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:30 IST
Last Updated 26 ಮಾರ್ಚ್ 2019, 19:30 IST
ಕನ್ಹಯ್ಯಾ
ಕನ್ಹಯ್ಯಾ   

ಪಟ್ನಾ: ಬಿಹಾರದ ಬೇಗುಸರಾಯ್‌ನಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿ ಗಿರಿರಾಜ್‌ ಸಿಂಗ್ ಅವರಿಗೆ ಇಷ್ಟವಿಲ್ಲದಿರುವುದು, ಹೋಮ್‌ವರ್ಕ್ ಮಾಡದ ಮಗು ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಂತೆ ತೋರುತ್ತಿದೆ ಎಂದು ಸಿಪಿಐ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ವ್ಯಂಗ್ಯ ಮಾಡಿದ್ದಾರೆ.

‘ಜನರನ್ನು ಪಾಕಿಸ್ತಾನಕ್ಕೆ ಉಚಿತವಾಗಿ ಪ್ರವಾಸಕ್ಕೆ ಕಳುಹಿಸುತ್ತೇನೆ ಎಂದು ಹೇಳಿ ಪ್ರಸಿದ್ಧರಾಗಿದ್ದ ಗಿರಿರಾಜ್‌ ಅವರು ಬೇಗುಸರಾಯ್‌ಗೆ ಬರಲು ಹಿಂಜರಿಯುತ್ತಿದ್ದಾರೆ’ ಎಂದು ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಬರೆದಿದ್ದಾರೆ. ಆದರೆ ಗಿರಿರಾಜ್ ಸಿಂಗ್ ಹೆಸರನ್ನು ನೇರವಾಗಿ ಅವರು ಪ್ರಸ್ತಾಪಿಸಿಲ್ಲ.

‘ಸ್ಫೋಟಕ ಹೇಳಿಕೆಗಳನ್ನು ಅವರು ಮೊದಲಿನಿಂದಲೂ ನೀಡುತ್ತಿದ್ದಾರೆ. ಮಾರ್ಚ್ 3ರ ಮೋದಿ ಅವರ ಪಟ್ನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳದವರನ್ನು ರಾಷ್ಟ್ರವಿರೋಧಿಗಳೆಂದು ಪರಿಗಣಿಸಬೇಕಾಗುತ್ತದೆ ಎಂದು ಇತ್ತೀಚೆಗೆ ಅವರು ಬೆದರಿಕೆ ಹಾಕಿದ್ದರು. ವಿಚಿತ್ರವೆಂದರೆ ಅನಾರೋಗ್ಯದ ಕಾರಣ ಅವರೇ ಗೈರಾಗಿದ್ದರು. ಇದು ನಿಜವಾದ ಭಾರತ. ಸುದ್ದಿ ವಾಹಿನಿಗಳಲ್ಲಿ ನಡೆಯುವ ಬಿರುಸಿನ ಚರ್ಚೆಗಳಿಗಿಂತ ಎಷ್ಟೋ ಭಿನ್ನವಾಗಿದೆ’ ಎಂದು ಕನ್ಹಯ್ಯಾ ಬರೆದಿದ್ದಾರೆ.

ADVERTISEMENT

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ನಾಯಕರಾಗಿದ್ದ ಕನ್ಹಯ್ಯಾ, ಅಲ್ಲಿ ದೇಶವಿರೋಧಿ ಘೋಷಣೆ ಕೂಗಿದರು ಎಂಬ ಕಾರಣಕ್ಕೆ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.

ಹಾಲಿ ಕ್ಷೇತ್ರ ನವಾದಾ ಬದಲಿಗೆ ಬೇಗುಸರಾಯ್ ಕ್ಷೇತ್ರದ ಟಿಕೆಟ್ ನೀಡಿದ್ದಕ್ಕೆ ಗಿರಿರಾಜ್ ಸಿಂಗ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಮೈತ್ರಿ ಪ್ರಕಾರ ನವಾದಾ ಕ್ಷೇತ್ರವನ್ನು ಎಲ್‌ಜೆಪಿಗೆ ಬಿಜೆಪಿ ಬಿಟ್ಟುಕೊಟ್ಟಿದೆ.

ದೆಹಲಿಯಲ್ಲಿ ಸುದ್ದಿವಾಹಿನಿ ಜೊತೆ ಮಾತನಾಡಿದ್ದ ಗಿರಿರಾಜ್, ‘ಇದು ನನ್ನ ಆತ್ಮಗೌರವದ ಪ್ರಶ್ನೆ. ಕೇಂದ್ರ ನಾಯಕತ್ವದ ಬಗ್ಗೆ ನನಗೆ ಆಕ್ಷೇಪವಿಲ್ಲ. ಬಿಜೆಪಿ ರಾಜ್ಯ ನಾಯಕರು ನನ್ನ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.