ADVERTISEMENT

ದೆಹಲಿ: ಬೈಕ್‌ನಲ್ಲಿ ಬಂದು ಬಾಲಕಿ ಮೇಲೆ ಆಸಿಡ್‌ ದಾಳಿ

ದೆಹಲಿ: ಬಾಲಕಿ ಮುಖದ ಮೇಲೆ ಸುಟ್ಟ ಗಾಯ: ಕಣ್ಣುಗಳಿಗೆ ಹಾನಿ: ಆರೋಗ್ಯ ಸ್ಥಿರ

ಪಿಟಿಐ
Published 14 ಡಿಸೆಂಬರ್ 2022, 11:37 IST
Last Updated 14 ಡಿಸೆಂಬರ್ 2022, 11:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಾಲಕಿ ಮೇಲೆ ಆಸಿಡ್‌ ಮಾದರಿಯ ರಾಸಾಯನಿಕ ದ್ರವ ಎರಚಿ ಪರಾರಿಯಾಗಿದ್ದಾರೆ. ಪಶ್ಚಿಮ ದೆಹಲಿಯ ಉತ್ತಮ್‌ ನಗರದ ಮೋಹನ್‌ ಗಾರ್ಡನ್‌ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಘಟನೆ ನಡೆದಿದೆ.

‘ಬಾಲಕಿಯನ್ನು ಸಫ್ತರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಮುಖದ ಮೇಲೆ ಶೇ 7 ರಿಂದ 8ರಷ್ಟು ಸುಟ್ಟ ಗಾಯಗಳಾಗಿವೆ. ಆಕೆಯ ಕಣ್ಣುಗಳಿಗೂ ಹಾನಿಯಾಗಿದೆ. ತೀವ್ರ ನಿಗಾ ಘಟಕದಲ್ಲಿ (ಐಸಿಯು) ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ಹೇಳಿದ್ದಾರೆ.

‘ಸಂತ್ರಸ್ತ ಬಾಲಕಿಗೆ 17 ವರ್ಷ ವಯಸ್ಸು. ಆಕೆ ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ತನ್ನ ತಂಗಿಯ ಜೊತೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಆಸಿಡ್‌ ಮಾದರಿಯ ರಾಸಾಯನಿಕ ದ್ರವ ಎರಚಿದ್ದಾಗಿ ಗೊತ್ತಾಗಿದೆ. ಮೋಹನ್‌ ಗಾರ್ಡನ್‌ ಠಾಣೆಯ ಅಧಿಕಾರಿಗಳಿಗೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಕುರಿತ ಮಾಹಿತಿ ಲಭಿಸಿತ್ತು’ ಎಂದು ದ್ವಾರಕಾ ವಿಭಾಗದ ಡಿಸಿಪಿ ಎಂ.ಹರ್ಷವರ್ಧನ್‌ ಮಾಹಿತಿ ನೀಡಿದ್ದಾರೆ.

ADVERTISEMENT

‘ದುಷ್ಕರ್ಮಿಗಳು ಬಾಲಕಿ ಮೇಲೆ ರಾಸಾಯನಿಕ ದ್ರವ ಎರಚುತ್ತಿರುವ ದೃಶ್ಯವು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯು ಇಬ್ಬರ ಹೆಸರನ್ನು ತಿಳಿಸಿದ್ದು, ಈ ಪೈಕಿ ಒಬ್ಬನನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದ್ದಾರೆ.

‘ಲೆಫ್ಟಿನೆಂಟ್‌ ಗವರ್ನರ್‌ ಸಾಹೇಬರೆ, ನೀವು ಕಾಲಿಟ್ಟ ನಂತರ ದೆಹಲಿಯಲ್ಲಿ ಅಪರಾಧ ಚಟುವಟಿಕೆಗಳು ಏರುತ್ತಿವೆ. ನಿಮ್ಮ ಬಳಿ ದೆಹಲಿ ಪೊಲೀಸರು ಇದ್ದಾರೆ. ದೆಹಲಿ ಸರ್ಕಾರದ ಕೆಲಸಗಳಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸಗಳತ್ತ ಗಮನಹರಿಸಿ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ವಕ್ತಾರ ಸೌರಭ್‌ ಭಾರದ್ವಾಜ್‌ ಟ್ವೀಟ್‌ ಮೂಲಕ ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧ ಕಿಡಿಕಾರಿದ್ದಾರೆ.

****
ಮುಖ್ಯಾಂಶಗಳು:

*ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಿದ ಪೊಲೀಸರು

*ಬಾಲಕಿ ಮೇಲೆ ರಾಸಾಯನಿಕ ದ್ರವ ಎರಚುತ್ತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆ

*ಬೆಳಿಗ್ಗೆ 7.30ರ ಸುಮಾರಿಗೆ ನಡೆದ ಘಟನೆ

****

ಆಸಿಡ್‌ ದಾಳಿಕೋರರಿಗೆ ಕಠಿಣ ಶಿಕ್ಷೆ ವಿಧಿಸಿ

‘ಬಾಲಕಿ ಮೇಲೆ ಆಸಿಡ್‌ ಮಾದರಿಯ ರಾಸಾಯನಿಕ ದ್ರವ ಎರಚಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಒತ್ತಾಯಿಸಿದ್ದಾರೆ.

‘ಈ ಘಟನೆ ಸಹಿಸಲಸಾಧ್ಯವಾದುದು. ಆರೋಪಿಗಳಿಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದೆಹಲಿಯಲ್ಲಿರುವ ಎಲ್ಲಾ ಬಾಲಕಿಯರ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಆಸಿಡ್‌ ಮಾರಾಟ ಅವ್ಯಾಹತವಾಗಿದೆ: ನೀವೇನು ಮಾಡುತ್ತಿದ್ದೀರಿ?’

‘ಆಯೋಗವು ಸಾಕಷ್ಟು ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಹಲವು ಶಿಫಾರಸುಗಳನ್ನು ಮಾಡಿದೆ. ಹೀಗಿದ್ದರೂ ಆಸಿಡ್‌ ಮಾರಾಟ ಅವ್ಯಾಹತವಾಗಿದೆ. ಯಾರು ಬೇಕಾದರೂ ಆಸಿಡ್‌ ಖರೀದಿಸಿ ಬಾಲಕಿಯರ ಮೇಲೆ ಎರಚಬಹುದಾಗಿದೆ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳದೆ ಸರ್ಕಾರಗಳು ನಿದ್ರೆಗೆ ಜಾರಿರುವುದಾದರೂ ಏಕೆ’ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಳಿವಾಲ್‌ ಪ್ರಶ್ನಿಸಿದ್ದಾರೆ.

ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹಾಕಿರುವ ಅವರು,‘ಆಸಿಡ್‌ ಮಾರಾಟ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದಿದ್ದಾರೆ.

****

ದೇಶದಲ್ಲಿ ಆಸಿಡ್‌ ನಿಷೇಧಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದೇವೆ. ಸರ್ಕಾರ ಇನ್ನು ಯಾವಾಗ ಎಚ್ಚೆತ್ತುಕೊಳ್ಳಲಿದೆ?

-ಸ್ವಾತಿ ಮಾಳಿವಾಲ್‌, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.