ADVERTISEMENT

ಜೀವಿತಾವಧಿಯ ಕ್ಯಾಬಿನೆಟ್‌ ಸ್ಥಾನ ತ್ಯಜಿಸಲು ರಾಣೆಗೆ ಒತ್ತಾಯ: ದಿನೇಶ್‌ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 4 ಮೇ 2022, 14:24 IST
Last Updated 4 ಮೇ 2022, 14:24 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌    

ಪಣಜಿ: ಗೋವಾದಲ್ಲಿ ಸುದೀರ್ಘಾವಧಿಗೆ ಮುಖ್ಯಮಂತ್ರಿಯಾಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಪ್ರತಾಪ್‌ಸಿಂಗ್‌ ರಾಣೆ ಅವರಿಗೆ ನೀಡಲಾಗಿರುವ ವಿವಾದಿತ ‘ಜೀವಮಾನದ ಕ್ಯಾಬಿನೆಟ್‌ ಸ್ಥಾನಮಾನ’ ಹುದ್ದೆಯನ್ನು ಅವರು ವಿನಮ್ರವಾಗಿ ತಿರಸ್ಕರಿಸಬೇಕು ಎಂದು ಎಐಸಿಸಿ ಗೋವಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಬುಧವಾರ ಒತ್ತಾಯಿಸಿದ್ದಾರೆ.

ಈ ಹುದ್ದೆಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಬಾಂಬೆ ಹೈಕೋರ್ಟ್‌ನಿಂದ ಶೀಘ್ರವೇ ತೀರ್ಪು ಬರುವ ನಿರೀಕ್ಷೆ ಇದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್‌ ಜೂನ್‌ 21ಕ್ಕೆ ಕಾಯ್ದಿರಿಸಿದೆ.

‘ಪ್ರತಾಪ್‌ ಸಿಂಗ್‌ ರಾಣೆ ಅವರದು ಮೇರು ವ್ಯಕ್ತಿತ್ವ. ‘ಜೀವಮಾನದ ಕ್ಯಾಬಿನೆಟ್‌ ಸ್ಥಾನಮಾನ’ ಅವರ ಘನತೆ ಹೆಚ್ಚಿಸುವುದಿಲ್ಲ. ಇದರ ಅವಶ್ಯಕತೆಯೂ ಅವರಿಗಿಲ್ಲ.ಅಲ್ಲದೇ ಈಸ್ಥಾನಮಾನಕ್ಕೆ ಕಾನೂನಿನ ಮಾನ್ಯತೆಯೂ ಇಲ್ಲ ಎನ್ನುವುದು ಖಾತ್ರಿ. ಹಾಗಾದ ಮೇಲೆ, ಬಾಂಬೆ ಹೈಕೋರ್ಟ್‌ ತೀರ್ಪಿನಿಂದ ಮುಜುಗರಕ್ಕೀಡಾಗುವುದೇಕೆ’ ಎಂದು ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ರಾಣೆ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದವರಲ್ಲಿ ಒಬ್ಬರು, ಅವರ ಪುತ್ರ ವಿಶ್ವಜಿತ್ ಪ್ರಸ್ತುತ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಸಚಿವರು. ಅವರ ಸೊಸೆ ದೇವಿಯಾ ಕೂಡ ಬಿಜೆಪಿ ಶಾಸಕಿ.

ರಾಣೆ ಅವರು ಈ ಬಾರಿಯ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಅವರ ಪುತ್ರನ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದರು. ಇದಕ್ಕಾಗಿ ಬಿಜೆಪಿಯು ರಾಣೆ ಅವರಿಗೆ ‘ಜೀವಮಾನದ ಕ್ಯಾಬಿನೆಟ್ ಸ್ಥಾನಮಾನ’ ನೀಡುವುದಾಗಿ ಭರವಸೆ ನೀಡಿತ್ತು. ಇದೇ ವರ್ಷದ ಏಪ್ರಿಲ್‌ನಲ್ಲಿ ಈ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಿತ್ತು.

ಈ ಹುದ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ, ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ಒಂದು ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ವಾದಿಸಿ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಐರಿಸ್ ರೋಡ್ರಿಗಸ್ ಗೋವಾದ ಬಾಂಬೆ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಪ್ರತಿವಾದಿಯಾಗಿರುವ ರಾಣೆ ಅವರು ಈ ಹುದ್ದೆಯ ಕಾನೂನುಬದ್ಧತೆ ಪರಿಶೀಲನೆಯನ್ನು ಕೋರ್ಟ್‌ ತೀರ್ಪಿಗೆಬಿಡುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.