ADVERTISEMENT

ಉತ್ತರಾಖಂಡಕ್ಕೆ ನೆರವಿನಹಸ್ತ

ಪಿಟಿಐ
Published 9 ಫೆಬ್ರುವರಿ 2021, 16:45 IST
Last Updated 9 ಫೆಬ್ರುವರಿ 2021, 16:45 IST
ಧೌಲಿಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯು ಪ್ರವಾಹಕ್ಕೆ ಕೊಚ್ಚಿಹೋದ ಕಾರಣ, ಸುತ್ತಮುತ್ತಲಿನ ಗ್ರಾಮಸ್ಥರ ಸಂಪರ್ಕಕ್ಕಾಗಿ ತಾತ್ಕಾಲಿಕ ಹಗ್ಗದ ಸೇತುವೆಯನ್ನು ನಿರ್ಮಿಸಲಾಗಿದೆ–ಪಿಟಿಐ ಚಿತ್ರ
ಧೌಲಿಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯು ಪ್ರವಾಹಕ್ಕೆ ಕೊಚ್ಚಿಹೋದ ಕಾರಣ, ಸುತ್ತಮುತ್ತಲಿನ ಗ್ರಾಮಸ್ಥರ ಸಂಪರ್ಕಕ್ಕಾಗಿ ತಾತ್ಕಾಲಿಕ ಹಗ್ಗದ ಸೇತುವೆಯನ್ನು ನಿರ್ಮಿಸಲಾಗಿದೆ–ಪಿಟಿಐ ಚಿತ್ರ   

ಡೆಹ್ರಾಡೂನ್/ಲಖನೌ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ಸಂಭವಿಸಿದ ದುರ್ಘಟನೆಗೆ ವಿವಿಧ ರಾಜ್ಯಗಳು ಸ್ಪಂದಿಸಿವೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪರಿಹಾರ ಕಾರ್ಯಾಚರಣೆಗೆ ನೆರವಾಗುವ ಸಲುವಾಗಿಮೂವರು ಸಚಿವರ ನಿಯೋಗವನ್ನು ಉತ್ತರಾಖಂಡಕ್ಕೆ ಕಳುಹಿಸಿದ್ದಾರೆ. ಮುಖ್ಯಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳ ತಂಡವೊಂದನ್ನು ರಚಿಸಿದ್ದಾರೆ. ರಾಜ್ಯದಲ್ಲಿ ನಿಯಂತ್ರಣ ಕೇಂದ್ರವನ್ನು ತೆರೆಯಲಾಗಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಉತ್ತರಾಖಂಡ ಸರ್ಕಾರಕ್ಕೆ ₹11 ಕೋಟಿ ದೇಣಿಗೆ ನೀಡಿದ್ದಾರೆ. ‘ಇಂತಹ ಸಂಕಷ್ಟದ ಸಮಯದಲ್ಲಿ ಉತ್ತರಾಖಂಡದ ಜೊತೆ ಹರಿಯಾಣ ಸರ್ಕಾರ ನಿಲ್ಲುತ್ತದೆ. ಸಾಧ್ಯವಿರುವ ಎಲ್ಲ ಸಹಾಯ ನೀಡಲಿದೆ’ ಎಂದು ಖಟ್ಟರ್ ಹೇಳಿದ್ದಾರೆ.

ADVERTISEMENT

ಜಾರ್ಖಂಡ್ ಸರ್ಕಾರವು ಸಹ ಎಲ್ಲ ರೀತಿಯ ಸಹಾಯವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ನೈಸರ್ಗಿಕ ವಿಕೋಪದಲ್ಲಿ ಸಿಲುಕಿರುವ ರಾಜ್ಯದ ಜನರಿಗೆ ಸಹಾಯ ಮಾಡಲು ಜಾರ್ಖಂಡ್ ಸರ್ಕಾರದ ಕಾರ್ಮಿಕ ಇಲಾಖೆ ನಿಯಂತ್ರಣ ಕೊಠಡಿ ತೆರೆದಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶ 70 ಮಂದಿ ನಾಪತ್ತೆ: ಲಖೀಂಪುರ ಖೇರಿಯ 34 ಜನರೂ ಸೇರಿದಂತೆ ಉತ್ತರ ಪ್ರದೇಶದ ಸುಮಾರು 70 ಮಂದಿ ಉತ್ತರಾಖಂಡ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದಾರೆ.

197 ಜನ ನಾಪತ್ತೆ: ಶಾ

ಉತ್ತರಾಖಂಡದ ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರವು ದಿನದ 24 ಗಂಟೆಗಳ ನಿಗಾ ವಹಿಸಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯಸಭೆಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.

ನೀರಿನ ಮಟ್ಟ ಹೆಚ್ಚಳವಾಗಿದ್ದರಿಂದ 13.2 ಮೆಗಾವಾಟ್ ಸಾಮರ್ಥ್ಯದ ರಿಷಿಗಂಗಾ ಸಣ್ಣ ಜಲವಿದ್ಯುತ್ ಯೋಜನೆ ಕೊಚ್ಚಿ ಹೋಗಿದೆ. ಧೌಲಿಗಂಗಾ ನದಿಯ ಕೆಳಭಾಗದ ತಪೋವನದಲ್ಲಿ ನಿರ್ಮಾಣ ಹಂತದಲ್ಲಿದ್ದ 520 ಮೆಗಾವಾಟ್‌ ಸಾಮರ್ಥ್ಯದ ಎನ್‌ಟಿಪಿಸಿ ಜಲ ವಿದ್ಯುತ್ ಯೋಜನೆಯ ಮೇಲೆ ಪರಿಣಾಮ ಉಂಟಾಗಿದೆ ಎಂದು ಶಾ ರಾಜ್ಯಸಭೆಗೆ ತಿಳಿಸಿದರು.

ಕಾರಣ ಹುಡಕಾಟ

ಹಿಮವನ್ನು ಘನೀಕರಿಸುವ ಮತ್ತು ಕರಗಿಸುವಿಕೆ ವಿದ್ಯಮಾನದಿಂದ ದುರ್ಬಲಗೊಂಡ ಬಂಡೆಯ ರಾಶಿಯು, ದುರ್ಬಲ ವಲಯವನ್ನು ಸೃಷ್ಟಿಸಿರಬಹುದು. ಇದು ನೀರ್ಗಲ್ಲು ಕುಸಿತಕ್ಕೆ ಪ್ರಚೋದನೆ ನೀಡಿದ ಕಾರಣ ಭಾನುವಾರ ಪ್ರವಾಹ ಉಂಟಾಗಿರಬಹುದು ಎಂದು ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ (ಡಬ್ಲ್ಯುಐಹೆಚ್ಜಿ) ವಿಜ್ಞಾನಿಗಳು ತಿಳಿಸಿದ್ದಾರೆ.

ಅಪ್ಪಳಿಸಿದ ಬಂಡೆಯ ರಾಶಿಯು ತನ್ನೊಂದಿಗೆ ಹಿಮದ ದಿಬ್ಬಗಳನ್ನು ಹೊತ್ತೊಯ್ದಿದೆ. ಇದು ಪ್ರವಾಹ ಉಂಟು ಮಾಡಿರುವ ಸಾಧ್ಯತೆಯಿದೆ ಎಂದು ತಂಡ ತಿಳಿಸಿದೆ. ಸಂಸ್ಥೆಯ ವಿಜ್ಞಾನಿಗಳು ಈ ಪ್ರದೇಶದ ಹೆಲಿಕಾಪ್ಟರ್ ಸಮೀಕ್ಷೆಯನ್ನು ನಡೆಸಿ, ಮಾರಣಾಂತಿಕ ಪ್ರವಾಹಕ್ಕೆ ಕಾರಣವಾದ ಅಂಶಗಳ ಬಗ್ಗೆ ಅವಲೋಕನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.