ADVERTISEMENT

ಗೋವಾ: ‘ಕ್ರೂರ’ ಪ್ರಾಣಿಗಳ ಸಾಕಾಣಿಕೆ ನಿಷೇಧ

ನೂತನ ಮಸೂದೆ ಅಂಗೀಕರಿಸಿದ ರಾಜ್ಯ ವಿಧಾನಸಭೆ

ಪಿಟಿಐ
Published 24 ಜುಲೈ 2025, 16:35 IST
Last Updated 24 ಜುಲೈ 2025, 16:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಣಜಿ: ಕ್ರೂರ ಎಂದು ಘೋಷಿಸಿರುವ ಪ್ರಾಣಿಗಳನ್ನು ಸಾಕುವುದು, ಆಮದು ಮಾಡಿಕೊಳ್ಳುವುದು ಹಾಗೂ ಅವುಗಳ ಸಂತಾನಾಭಿವೃದ್ಧಿ ಮಾಡಿಸುವುದನ್ನು ನಿಷೇಧಿಸುವ ಮಸೂದೆಯನ್ನು ಗೋವಾ ವಿಧಾನಸಭೆಯು ಬುಧವಾರ ಅಂಗೀಕರಿಸಿತು. 

ಈ ಮಸೂದೆಯು, ಯಾವುದೇ ವರ್ಗದ ಅಥವಾ ತಳಿಯ ಪ್ರಾಣಿಗಳನ್ನು ‘ಕ್ರೂರ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತದೆ. 

‘ಪಿಟ್‌ಬುಲ್‌ ಹಾಗೂ ರಾಟ್‌ವೀಲರ್ ತಳಿಯ ನಾಯಿಗಳು ಮಕ್ಕಳಿಗೆ ಕಚ್ಚುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾದ ಕಾರಣ ಸರ್ಕಾರವು ‘ಪ್ರಾಣಿ ಸಂತಾನೋತ್ಪತ್ತಿ ಹಾಗೂ ಸಾಕಾಣಿಕೆ ಮಸೂದೆ– 2025’ಯನ್ನು ತಂದಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದರು. 

ADVERTISEMENT

ನಿಯಮವನ್ನು ಉಲ್ಲಂಘಿಸಿದರೆ 15 ದಿನಗಳಿಂದ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗುತ್ತದೆ. 

ಸದ್ಯ ರಾಜ್ಯದಲ್ಲಿ ಇಂತಹ ಪ್ರಾಣಿಗಳನ್ನು ಸಾಕುತ್ತಿರುವ ಜನರು 30 ದಿನಗಳ ಒಳಗೆ ಪಶು ಸಂಗೋಪನೆ ಇಲಾಖೆಗೆ ಮಾಹಿತಿ ನೀಡಬೇಕು. 60 ದಿನಗಳ ಒಳಗಾಗಿ ಆ ಪ್ರಾಣಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಬೇಕು ಎಂದು ಮಸೂದೆಯಲ್ಲಿದೆ. 

ಕ್ರೂರ ಪ್ರಾಣಿಗಳಿಂದ ಗಾಯಗೊಂಡ ಹಾಗೂ ಸಾವಿಗೀಡಾದ ಪ್ರಕರಣಗಳಲ್ಲಿ ಈ ಮಸೂದೆಯಡಿ ಪರಿಹಾರ ಒದಗಿಸಲಾಗುತ್ತದೆ. ಘಟನೆ ನಡೆದ 6 ತಿಂಗಳ ಒಳಗಾಗಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. 

ಮಸೂದೆ ಕುರಿತು ವಿವರವಾದ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕರು ಆಗ್ರಹಿಸಿದರು. ಇದನ್ನು ತಳ್ಳಿ ಹಾಕಿದ ಸಾವಂತ್‌, ‘ರಾಜ್ಯದ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ರೂಪಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.