ADVERTISEMENT

ಗೋವಾ: ಸಾಮಾಜಿಕ ಹೋರಾಟಗಾರನ ಮೇಲಿನ ಹಲ್ಲೆಯನ್ನು ಖಂಡಿಸಿದ ಅರವಿಂದ ಕ್ರೇಜಿವಾಲ್‌

ಪಿಟಿಐ
Published 19 ಸೆಪ್ಟೆಂಬರ್ 2025, 7:31 IST
Last Updated 19 ಸೆಪ್ಟೆಂಬರ್ 2025, 7:31 IST
   

ಪಣಜಿ: ಗೋವಾದಲ್ಲಿ ಸಾಮಾಜಿಕ ಹೋರಾಟಗಾರ ರಾಮ ಕಂಕೋಣಕರ್ ಮೇಲೆ ನಡೆದಿರುವ ಹಲ್ಲೆಯನ್ನು ಎಎಪಿ ನಾಯಕ ಅರವಿಂದ ಕ್ರೇಜಿವಾಲ್‌ ಅವರು ಶುಕ್ರವಾರ ಖಂಡಿಸಿದ್ದಾರೆ.

ಕಾರಂಜಲೆಮ್ ಬಳಿ ಕಂಕೋಣಕರ್ ಅವರ ಮೇಲೆ ಆರು ಜನರು ಗುರುವಾರ ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದಾನೆ.

‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ಗೋವಾದ ಕಾನೂನು ಸುವ್ಯವಸ್ಥೆಯು ಹಳ್ಳಹಿಡಿದಿದೆ. ಹಗಲಿನಲ್ಲೇ ಸಾಮಾಜಿಕ ಹೋರಾಟಗಾರ ರಾಮ ಕಂಕೋಣಕರ್ ಅವರ ಮೇಲೆ ಹಲ್ಲೆ ನಡೆದಿದೆ. ಗಲಭೆ, ಮಾದಕ ವಸ್ತು, ಮಹಿಳೆಯರ ಮೇಲೆ ಕಿರುಕುಳ ಸಾಮಾನ್ಯವಾಗಿದ್ದವು, ಇದೀಗ ಹಲ್ಲೆಗಳು ಕೂಡ ನಡೆಯುತ್ತಿವೆ’ ಎಂದು ಅರವಿಂದ ಕ್ರೇಜಿವಾಲ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ರಾಮ ಕಂಕೋಣಕರ್ ಅವರು ಗೋವಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ರಾಜಕೀಯ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಅವರನ್ನು ಭೇಟಿಯಾಗಿದ್ದಾರೆ.

ಆಯುಧಧಾರಿಗಳ ಗುಂಪೊಂದು ರಾಮ ಕಂಕೋಣಕರ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಅವರ ಮುಖಕ್ಕೆ ಸಗಣಿಯನ್ನು ಬಳಿದು ಹೋಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ. ಅವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.