ADVERTISEMENT

ಮಹದಾಯಿ ವಿವಾದ: ನ್ಯಾಯಾಲಯದ ಹೊರಗೆ ಇತ್ಯರ್ಥ ಸಾಧ್ಯವಿಲ್ಲ ಎಂದ ಪ್ರಮೋದ್ ಸಾವಂತ್

ಪಿಟಿಐ
Published 27 ನವೆಂಬರ್ 2020, 12:56 IST
Last Updated 27 ನವೆಂಬರ್ 2020, 12:56 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್   

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥವಾಗುವ ಸಾಧ್ಯತೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಶುಕ್ರವಾರ ತಳ್ಳಿ ಹಾಕಿದ್ದಾರೆ.

ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿವೆ.

‘ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ರೀತಿಯ ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ನಾವು ಸಿದ್ಧರಿಲ್ಲ. ನಮ್ಮ ಅರ್ಜಿಗಳು ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಉಳಿದಿವೆ. ನಾವು ನ್ಯಾಯಾಲಯದಲ್ಲೇ ಹೋರಾಟ ಮುಂದುವರಿಸುತ್ತೇವೆ’ ಎಂದು ಸಾವಂತ್‌ ತಿಳಿಸಿದ್ದಾರೆ.

ADVERTISEMENT

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಂತರರಾಜ್ಯ ನೀರಿನ ವಿವಾದದ ಬಗ್ಗೆ ಚರ್ಚಿಸಲು ಕಳುಹಿಸಿದ ಅಧಿಕಾರಿಗಳ ಭೇಟಿಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ನಮ್ಮ ಬೇಡಿಕೆಯೆಂದರೆ ನಮ್ಮ ನೀರನ್ನು ಬೇರೆಡೆಗೆ ತಿರುಗಿಸಿರುವ ಕರ್ನಾಟಕ ನಮ್ಮ ಪಾಲಿನ ನೀರನ್ನು ತಕ್ಷಣ ಬಿಡುಗಡೆ ಮಾಡಬೇಕು. ಮಹಾದಾಯಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ’ ಎಂದು ಅವರು ಹೇಳಿದರು.

ಬಿಜೆಪಿಯ ಗೋವಾ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಕರ್ನಾಟಕದೊಂದಿಗೆ ಮಹದಾಯಿ ನದಿ ನೀರು ಹಂಚಿಕೆ ಕುರಿತು ಮಾತುಕತೆ ನಡೆಸಲಾಯಿತು’ ಎಂದು ಸಾವಂತ್ ಹೇಳಿದ್ದಾರೆ.

ಕರಾವಳಿ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಸಿ.ಟಿ.ರವಿ ಈ ವಾರದ ಆರಂಭದಲ್ಲಿ ಗೋವಾಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.