ADVERTISEMENT

ಗೋವಾ: ಪ್ರಿಯಾಂಕಾ ಗಾಂಧಿ ಭೇಟಿ ದಿನವೇ ಕಾಂಗ್ರೆಸ್‌ ನಾಯಕರ ಸಾಮೂಹಿಕ ರಾಜೀನಾಮೆ

ಪಿಟಿಐ
Published 10 ಡಿಸೆಂಬರ್ 2021, 16:09 IST
Last Updated 10 ಡಿಸೆಂಬರ್ 2021, 16:09 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭೇಟಿಯ ದಿನವೇ (ಶುಕ್ರವಾರ) ಅಲ್ಲಿನ ಕಾಂಗ್ರೆಸ್ ನಾಯಕರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಪೊರ್‌ವೊರಿಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರ ಗುಂಪು ಶುಕ್ರವಾರ ಬೆಳಿಗ್ಗೆಯೇ ರಾಜೀನಾಮೆ ಸಲ್ಲಿಸಿತು. ದಿಢೀರ್ ರಾಜೀನಾಮೆಯಿಂದಾಗಿ ಗೋವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ಕಾಂಗ್ರೆಸ್‌ಗೆ ಈಗ ಗೊಂದಲ ಎದುರಾಗಿದೆ.

ಪೊರ್‌ವೊರಿಮ್ ವಿಧಾನಸಭಾ ಕ್ಷೇತ್ರದ ಬೆಳವಣಿಗೆಯ ಬೆನ್ನಲ್ಲೇ ದಕ್ಷಿಣ ಗೋವಾ ಕಾಂಗ್ರೆಸ್ ಹಿರಿಯ ನಾಯಕ ಮೊರೊನಾ ರೆಬೆಲೊ ಅವರು ರಾಜೀನಾಮೆ ನೀಡಿದ್ದಾರೆ.

ADVERTISEMENT

‘ಪಕ್ಷದ ವಿರುದ್ದ ಕೆಲಸ ಮಾಡಿದ್ದರೂ ಕರ್ಟೊರಿಮ್ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಕಾರಣ ತಾವು ಅಸಮಾಧಾನ ಹೊಂದಿರುವುದಾಗಿ’ ರೆಬೆಲೊ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

‘ಕಳೆದ ನಾಲ್ಕೂವರೆ ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದೇ ಪಕ್ಷದ ನಾಯಕರನ್ನು ಮತ್ತು ನಿಮ್ಮನ್ನು ನಿಂದಿಸಿರುವ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕರ್ಟೊರಿಮ್‌ನ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ. ಅಂಥವರಿಗೇ ಪಕ್ಷದ ಕಾರ್ಯಾಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ ಮತ್ತು ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಹಿರಿಯ ನಾಯಕರು ಅಭ್ಯರ್ಥಿ ಎಂದು ಘೋಷಿಸಲಾಗಿದೆ’ ಎಂದು ರೆಬೆಲೊ ಅವರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಅಧ್ಯಕ್ಷ ಗಿರೀಶ್ ಚೋಡಂಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘2022ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಗಂಭೀರವಾಗಿಲ್ಲ’ ಎಂದು ಸ್ವತಂತ್ರ ಶಾಸಕ ರೋಹನ್ ಖೌಂಟೆ ಅವರ ಬೆಂಬಲಿತ ಗುಂಪೊಂದು ಹೇಳಿಕೆ ನೀಡಿದೆ.

‘ಮುಂಬರುವ ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧಿಸಲು ಕಾಂಗ್ರೆಸ್ ಆಸಕ್ತಿ ತೋರುತ್ತಿಲ್ಲ. ಪಕ್ಷದ ಕೆಲವು ನಾಯಕರ ವರ್ತನೆಯಿಂದಾಗಿ ಪಕ್ಷವು ಗೆಲುವಿನ ಬಗ್ಗೆ ಚಿಂತನೆ ನಡೆಸಿಲ್ಲ’ ಎಂದೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಪೇಶ್ ನಾಯ್ಕ್ ಸುದ್ದಿಗಾರರಿಗೆ ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಜೊತೆಗಿನ ಹೊಂದಾಣಿಕೆಯ ಬಗ್ಗೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳು ಹೊರಹೊಮ್ಮಿದ ನಂತರ ರಾಜೀನಾಮೆಗಳ ಸರಣಿ ನಡೆದಿದೆ. ಎಐಸಿಸಿ ಗೋವಾ ಚುನಾವಣಾ ಉಸ್ತುವಾರಿ ಪಿ. ಚಿದಂಬರಂ ಅವರು ಗುರುವಾರ ಜಿಎಫ್‌ಪಿ ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದೆ ಮತ್ತು ಈ ಹಂತದಲ್ಲಿ ಅದನ್ನು ಮೈತ್ರಿ ಎಂದು ಕರೆಯಲು ನಿರಾಕರಿಸಿದೆ ಎಂದು ಹೇಳಿದ್ದರು.

ಗೋವಾ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಅವರು, ಜಿಎಫ್‌ಪಿ ಮುಖ್ಯಸ್ಥ ವಿಜಯ್ ಸರ್‌ದೇಸಾಯಿ ಮತ್ತು ಜಿಪಿಸಿಸಿ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರೊಂದಿಗೆ ಶನಿವಾರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉದ್ಯೋಗದಲ್ಲಿ ಶೇ 30 ಮೀಸಲಾತಿ’
ಪಣಜಿ: ‘ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 30 ಮೀಸಲಾತಿ ಕಲ್ಪಿಸುವುದಾಗಿ’ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಭರವಸೆ ನೀಡಿದ್ದಾರೆ.

ಇಲ್ಲಿನ ಕ್ವಿಪೆಮ್ ವಿಧಾನಸಭಾ ಕ್ಷೇತ್ರದ ಮೊರ್ಪಿರ್ಲಾ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಬುಡಕಟ್ಟು ಮಹಿಳೆಯೊಂದಿಗೆ ಸಂವಾದ ನಡೆಸಿದ ಅವರು, ‘ನೀವು ಈ ಬಾರಿ ಮತ ಚಲಾಯಿಸಲು ಹೋದಾಗ, ಮೊದಲು ನಿಮ್ಮ ಬಗ್ಗೆ, ನಿಮ್ಮ ರಾಜ್ಯ ಮತ್ತು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ಪಕ್ಷಕ್ಕೆ ಮತ ನೀಡಿ. ಕಾಂಗ್ರೆಸ್ ಮಾತ್ರ ನಿಮಗಾಗಿ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ 30ರಷ್ಟು ಉದ್ಯೋಗಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿಡಲಿದೆ’ ಎಂದರು.

‘ಹೊರಗಿನಿಂದ ಬರುವ ಪಕ್ಷಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದು ಆಮ್‌ ಆದ್ಮಿ ಪಕ್ಷದ ಹೆಸರು ಉಲ್ಲೇಖಿಸದೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.