ADVERTISEMENT

ಶಾಸಕರ ಅನರ್ಹತೆ: ಗೋವಾ ಸ್ಪೀಕರ್‌ಗೆ ನಿರ್ದೇಶನ ಕೋರಿ ಅರ್ಜಿ

ಪಿಟಿಐ
Published 4 ಜನವರಿ 2021, 8:17 IST
Last Updated 4 ಜನವರಿ 2021, 8:17 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಗೋವಾದಲ್ಲಿ 2019ರ ಜುಲೈ ತಿಂಗಳಲ್ಲಿ ಪಕ್ಷಾಂತರ ಮಾಡಿ ಬಿಜೆಪಿಗೆ ಸೇರ್ಪಡೆಯಾಗಿದ್ದ 10 ಶಾಸಕರ ಸದಸ್ಯತ್ವ ರದ್ದತಿಗೆ ಕೋರಿದ್ದ ತಮ್ಮ ಅರ್ಜಿ ಇತ್ಯರ್ಥಪಡಿಸಲು ವಿಧಾನಸಭೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು’ ಎಂದು ಗೋವಾದ ಕಾಂಗ್ರೆಸ್‌ ಮುಖಂಡ ಗಿರೀಶ್ ಚೋಡನ್ಕರ್ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಅರ್ಜಿಯನ್ನು ಫೆಬ್ರುವರಿ ಎರಡನೇ ವಾರ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಮುಖ್ ಯನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠವು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಅವರಿಗೆ ತಿಳಿಸಿತು.

‘10 ಶಾಸಕರ ಅನರ್ಹತೆ ಕೋರಿ ಆಗಸ್ಟ್ 2019ರಲ್ಲಿ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಒಂದೂವರೆ ವರ್ಷ ಕಳೆದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಕಪಿಲ್‌ ಸಿಬಲ್ ಪೀಠದ ಗಮನಕ್ಕೆ ತಂದರು.

ADVERTISEMENT

‌ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಈ ಕುರಿತು ಸ್ಪೀಕರ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದೂ ಸಿಬಲ್ ಮನವಿ ಮಾಡಿದರು. ಶಾಸಕರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ಚೋಹಡ್ಕರ್‌ ಅರ್ಜಿ ಸಲ್ಲಿಕೆಯಾಗಿದೆ. ವಿಚಾರಣೆಗೆ ದಿನಾಂಕ ನಿಗದಿಪಡಿಸಬಹುದು ಎಂದು ತಿಳಿಸಿದರು.

ಇದಕ್ಕೂ ಮೊದಲು ಕೋರ್ಟ್ ಸ್ಪೀಕರ್ ಕಚೇರಿ ಮತ್ತು 10 ಶಾಸಕರಿಂದಪ್ರತಿಕ್ರಿಯೆ ಕೋರಿತ್ತು. ‘ತಮ್ಮ ಅರ್ಜಿ ಇತ್ಯರ್ಥ ಆಗುವವರೆಗೆ ಶಾಸಕರು ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಬೇಕು’ ಎಂದು ಚೋಡನ್ಕರ್‌ ಮನವಿ ಮಾಡಿದ್ದರು.

ಈ 10 ಶಾಸಕರು 2019ರ ಜುಲೈ ತಿಂಗಳಲ್ಲಿ ತಾವು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಸಂಖ್ಯೆಯಲ್ಲಿ ಇದ್ದೇವೆ ಎಂದು ಹೇಳಿಕೊಂಡಿದ್ದು, ಬಿಜೆಪಿ ಜೊತೆಗೆ ವಿಲೀನ ಮಾಡುವಂತೆ ಸ್ಪೀಕರ್‌ ಅವರಿಗೆ ಕೋರಿದ್ದರು ಎಂದು ತಿಳಿಸಿದ್ದರು. ಈ ಮನವಿಪರಿಗಣಿಸಿದ ಸ್ಪೀಕರ್, 10 ಶಾಸಕರಿಗೂ ಬಿಜೆಪಿ ಸದಸ್ಯರ ಜೊತೆಗೆ ಆಸನ ಸೌಲಭ್ಯ ಕಲ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.