ADVERTISEMENT

ಲೈಂಗಿಕ ಕಿರುಕುಳ: ಸಾಕ್ಷ್ಯಾಧಾರಗಳಿಲ್ಲದೆ ಪತ್ರಕರ್ತ ತರುಣ್ ತೇಜ್‌ಪಾಲ್ ಖುಲಾಸೆ

ಪಿಟಿಐ
Published 26 ಮೇ 2021, 7:12 IST
Last Updated 26 ಮೇ 2021, 7:12 IST
ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್
ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್   

ಪಣಜಿ: ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರು ತಮ್ಮ ವಿರುದ್ಧದ ಎಲ್ಲ ಲೈಂಗಿಕ ದೌರ್ಜನ್ಯ ಆರೋಪಗಳಿಂದ ಖುಲಾಸೆಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೋವಾದ ಸೆಷನ್ಸ್ ನ್ಯಾಯಾಲಯವು ದೂರುದಾರ ಮಹಿಳೆ ಮಾಡಿದ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎನ್ನುವುದನ್ನು ಗಮನಿಸಿರುವುದಾಗಿ ತಿಳಿಸಿದೆ.

ನವೆಂಬರ್ 2013ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 21 ರಂದು ನ್ಯಾಯಾಲಯ ನೀಡಿದ್ದ ತೀರ್ಪಿನ ಆದೇಶದ ಪ್ರತಿ ಮಂಗಳವಾರ ಲಭ್ಯವಾಗಿದೆ.

ರಾಜ್ಯದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಾಜಿ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ತೆಹಲ್ಕಾ ಸುದ್ದಿ ಪತ್ರಿಕೆಯ ಸ್ಥಾಪಕ-ಸಂಪಾದಕ ತೇಜ್‌ಪಾಲ್ ಅವರನ್ನು ಕಳೆದ ಶುಕ್ರವಾರ(ಮೇ 21) ಗೋವಾದ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ADVERTISEMENT

ನ್ಯಾಯಾಧೀಶರಾದ ಕ್ಷಮಾ ಜೋಶಿ ಅವರು ತನ್ನ ವಿವರವಾದ ಲಿಖಿತ ಆದೇಶದಲ್ಲಿ, 'ದಾಖಲೆಯ ಸಾಕ್ಷ್ಯಗಳನ್ನು ಪರಿಗಣಿಸಿದಾಗ, ಆರೋಪಿಗೆಸಂಶಯದ ಲಾಭವನ್ನು ನೀಡಲಾಗುತ್ತದೆ. ಏಕೆಂದರೆ ದೂರು ನೀಡಿದ ಮಹಿಳೆ ಮಾಡಿದ ಆರೋಪಗಳನ್ನು ಬೆಂಬಲಿಸುವ ಯಾವುದೇ ದೃಢೀಕರಣದ ಪುರಾವೆಗಳಿಲ್ಲ' ಎಂದು ಹೇಳಿದ್ದಾರೆ.

500 ಪುಟಗಳ ಆದೇಶದಲ್ಲಿ, ಎಂಟು ವರ್ಷಗಳ ಹಳೆಯ ಪ್ರಕರಣದ ಪ್ರಮುಖ ಅಂಶಗಳ ಬಗ್ಗೆ ತನಿಖಾ ಅಧಿಕಾರಿ ಅಥವಾ ಐಒ (ಅಪರಾಧ ವಿಭಾಗದ ಅಧಿಕಾರಿ ಸುನೀತಾ ಸಾವಂತ್) ಸೂಕ್ತ ತನಿಖೆ ನಡೆಸಿಲ್ಲ ಎಂದಿರುವ ನ್ಯಾಯಾಲಯ, 'ಅತ್ಯಾಚಾರವು ಬಲಿಪಶುವಿಗೆ ಹೆಚ್ಚಿನ ಯಾತನೆ ಮತ್ತು ಅವಮಾನವನ್ನು ಉಂಟುಮಾಡುತ್ತದೆ ಆದರೆ ಅದೇ ಸಮಯದಲ್ಲಿ ಅತ್ಯಾಚಾರದ ಸುಳ್ಳು ಆರೋಪವು ಆರೋಪಿಗೆ ಸಮಾನ ತೊಂದರೆ ಮತ್ತು ಅವಮಾನ ಮತ್ತು ಹಾನಿಯನ್ನುಂಟುಮಾಡುತ್ತದೆ' ಎಂದು ಹೇಳಲಾಗಿದೆ.

ಸಂತ್ರಸ್ತೆ ಆಘಾತಕ್ಕೊಳಗಾಗಿದ್ದಾಳೆ ಎಂಬ ಸಮರ್ಥನೆಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಮಹಿಳೆಯ ಕೆಲವು ವಾಟ್ಸಾಪ್ ಸಂದೇಶಗಳು ತಾನು ಹೇಳಿಕೊಂಡಂತೆ ಆಘಾತಕ್ಕೊಳಗಾಗಿರಲಿಲ್ಲ ಮತ್ತು ಅಧಿಕೃತ ಕಾರ್ಯಕ್ರಮ (ನಿಯತಕಾಲಿಕ ಆಯೋಜಿಸಿದ) ದ ನಂತರ ಅಪರಾಧ ನಡೆದ ಸ್ಥಳವಾದ ಗೋವಾದಲ್ಲಿಯೇ ಉಳಿಯಲು ಯೋಜಿಸಿದ್ದರು ಎಂಬುದನ್ನು ತೋರಿಸಿದೆ ಎಂದು ಹೇಳಲಾಗಿದೆ.

ದೂರುದಾರ ಮಹಿಳೆಯು ಅನೇಕ ಸಂಘರ್ಷದ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದನ್ನು ಗಮನಿಸಿರುವ ನ್ಯಾಯಾಧೀಶರು, ದೂರುದಾರ ಮಹಿಳೆಯು ಮಾಡಿರುವ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಉಂಟುಮಾಡುವ ಅನೇಕ ಪುರಾವೆಗಳು ದಾಖಲೆಯಲ್ಲಿವೆ' ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಯುತ ತನಿಖೆ ನಡೆಸುವುದು ಆರೋಪಿಗಳ ಮೂಲಭೂತ ಹಕ್ಕಾಗಿದ್ದು, ಆದರೆ, ತನಿಖೆ ನಡೆಸುವಾಗ ತನಿಖಾಧಿಕಾರಿ ಲೋಪ ಎಸಗಿದ್ದಾರೆ. ಹೋಟೆಲ್‌ನ 7ನೇ ಬ್ಲಾಕ್‌ನ 1ನೇ ಮಹಡಿಯ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ತನಿಖಾ ಅಧಿಕಾರಿ ನಿರ್ಣಾಯಕ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ, ಇದು ಆರೋಪಿಯ ಮುಗ್ಧತೆಗೆ ಸ್ಪಷ್ಟ ಪುರಾವೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತರುಣ್ ಎದುರಿಸುತ್ತಿದ್ದರು. ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನವೆಂಬರ್ 2013ರಲ್ಲಿ ತೇಜ್‌ಪಾಲ್ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಮೇ. 2014ರಿಂದ ಅವರು ಜಾಮೀನು ಪಡೆದು ಹೊರಗಿದ್ದರು.

ಗೋವಾ ಅಪರಾಧ ವಿಭಾಗವು ತೇಜ್‌ಪಾಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಐಪಿಸಿ ಸೆಕ್ಷನ್ 341, 342, 354, 354-ಎ (ಲೈಂಗಿಕ ಕಿರುಕುಳ), 354-ಬಿ, 376 (2) (ಎಫ್) (ಮಹಿಳೆಯರ ಮೇಲೆ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಅತ್ಯಾಚಾರ ಎಸಗುವುದು) ಮತ್ತು 376 (2) ಕೆ) (ನಿಯಂತ್ರಣದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.