ADVERTISEMENT

ಕೇರಳದ ಹಾದಿಯಲ್ಲಿ ಗೋವಾ: ಮಾಧವ ಗಾಡ್ಗೀಳ್‌ ಎಚ್ಚರಿಕೆ

ಪಿಟಿಐ
Published 19 ಆಗಸ್ಟ್ 2018, 16:51 IST
Last Updated 19 ಆಗಸ್ಟ್ 2018, 16:51 IST
ಕೇರಳದ ಕೊಚ್ಚಿಯಲ್ಲಿ ಪ್ರವಾಹದ ನೀರಿನಿಂದ ಭಾನುವಾರ ಜಮೀನು, ಮನೆಗಳು ಜಲಾವೃತವಾಗಿರುವ ದೃಶ್ಯ. ಚಿತ್ರ: ಪಿಟಿಐ
ಕೇರಳದ ಕೊಚ್ಚಿಯಲ್ಲಿ ಪ್ರವಾಹದ ನೀರಿನಿಂದ ಭಾನುವಾರ ಜಮೀನು, ಮನೆಗಳು ಜಲಾವೃತವಾಗಿರುವ ದೃಶ್ಯ. ಚಿತ್ರ: ಪಿಟಿಐ   

ಪಣಜಿ: ಪರಿಸರ ಸಂರಕ್ಷಣೆಗೆ ತಕ್ಷಣ ಮುಂಜಾಗ್ರತೆ ವಹಿಸದಿದ್ದರೆ ಭೀಕರ ಪ್ರವಾಹದಿಂದ ನಲುಗುತ್ತಿರುವ ಕೇರಳದ ಪರಿಸ್ಥಿತಿಯನ್ನೇ ಗೋವಾ ಕೂಡ ಅನುಭವಿಸಬೇಕಾಗುತ್ತದೆ ಎಂದು ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಎಚ್ಚರಿಸಿದ್ದಾರೆ.

ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತು ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಅವರು, ದಕ್ಷಿಣದ ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಮತ್ತು ಭೂಕುಸಿತದ ಬಗ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ರಾಜ್ಯಗಳಂತೆ ಗೋವಾದಲ್ಲೂ ದುರಾಸೆಯ ಮತ್ತು ಅನಿಯಂತ್ರಿತ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸುಮಾರು ₹35,000 ಕೋಟಿ ಅಕ್ರಮ ಸಂಪಾದನೆ ಮಾಡಿಕೊಳ್ಳುತ್ತಿರುವುದನ್ನು ಕೇಂದ್ರ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಎಂ.ಬಿ.ಶಾ ಆಯೋಗವೇ ಪತ್ತೆ ಹಚ್ಚಿದೆ. ಪರಿಸರವನ್ನು ಬಲಿಕೊಡುತ್ತಿರುವ ಇಂತಹ ಅಕ್ರಮ ಚಟುವಟಿಕೆಗಳಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಕೃತಿಕ ಸಮಸ್ಯೆಗಳನ್ನು ರಾಜ್ಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಪಶ್ಚಿಮಘಟ್ಟದಲ್ಲಿ ಪರಿಸರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳು ಆರಂಭವಾಗುತ್ತವೆ. ಗೋವಾ ಕೂಡ ಇದರಿಂದ ಹೊರತಾಗಿಲ್ಲ. ಕೇರಳದಲ್ಲಿ ಪಶ್ಚಿಮಘಟ್ಟ ಪ್ರದೇಶ ಎತ್ತರದಲ್ಲಿರುವಷ್ಟು ಗೋವಾದಲ್ಲಿ ಇಲ್ಲ. ಆದರೆ, ಈ ರಾಜ್ಯ ಎಲ್ಲ ರೀತಿಯ ಸಂಕಷ್ಟಗಳನ್ನು ಎದುರಿಸುವುದು ಖಚಿತ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.

‘ಕಡಿಮೆ ಬಂಡವಾಳ ಹೂಡಿಕೆಯ ಕಲ್ಲುಗಣಿಗಾರಿಕೆ, ಹೆಚ್ಚು ಲಾಭ ತಂದುಕೊಡುವ ವ್ಯವಹಾರವಾಗಿದೆ. ಹಾಗಾಗಿ ಪಶ್ಚಿಮಘಟ್ಟದಲ್ಲಿ ಕಲ್ಲುಗಣಿಗಾರಿಕೆ ವ್ಯಾಪಕವಾಗಿ ಹರಡಿದೆ. ಲಾಭದ ಆಸೆಗೆ ಕಟ್ಟುಬಿದ್ದು, ಪರಿಸರದ ಮೇಲೆ ಉಂಟಾಗುವ ಹಾನಿ ಪರಿಶೀಲಿಸದೆ, ಇಂತಹ ವ್ಯವಹಾರಗಳಿಗೆ ಅನುಮತಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಆರ್ಥಿಕ ಅಸಮಾನತೆಯೂ ಇನ್ನಷ್ಟು ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಬ್ಬಿಣ ಅದಿರು ಕಂಪನಿಗಳು ನೀಡಿರುವ ಮಾಹಿತಿ ಆಧರಿಸಿ ಗೋವಾ ಸರ್ಕಾರ 2011ರಲ್ಲಿ ಸಿದ್ಧಪಡಿಸಿದ್ದ ಪರಿಸರ ಪರಿಣಾಮದ ಅಧ್ಯಯನ (ಇಐಎ) ವರದಿಯನ್ನು ವಿಸ್ತೃತ ಅಧ್ಯಯನ ನಡೆಸಿರುವ ಗಾಡ್ಲೀಳ್‌, ‘ಗಣಿ ಕಂಪನಿಗಳು ಆ ವರದಿಯಲ್ಲಿ ಸುಳ್ಳು ಮಾಹಿತಿ ಸಲ್ಲಿಸಿರುವುದು ಕಂಡುಬಂದಿದೆ’ ಎಂದರು.

‘ರಾಜ್ಯದ ಬಯಲು ಪ್ರದೇಶದಲ್ಲಿ ಅನೇಕ ಜಲಮೂಲಗಳು ಉಗಮವಾಗುತ್ತವೆ. ಆದರೆ, ಗಣಿ ಕಂಪನಿಗಳು ಈ ಅಂಶ ಮರೆಮಾಚಿ ತಪ್ಪು ಮಾಹಿತಿ ನೀಡಿವೆ. ನೀರಿನ ಒರತೆಗಳಿಗೆ ಗಣಿಗಾರಿಕೆಯಿಂದ ಉಂಟಾಗುವ ಪರಿಣಾಮವನ್ನು ಪ್ರತಿ ಇಐಎ ವರದಿಯಲ್ಲೂ ಮರೆ ಮಾಚಲಾಗಿದೆ’ ಎಂದು ಅವರು ಹೇಳಿದರು.

ಕೇರಳದ ಕೊಚ್ಚಿಯಲ್ಲಿ ಪ್ರವಾಹದ ನೀರಿನಿಂದ ಭಾನುವಾರ ಜಮೀನು, ಮನೆಗಳು ಜಲಾವೃತವಾಗಿರುವ ದೃಶ್ಯ. ಚಿತ್ರ: ಪಿಟಿಐ

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.