ADVERTISEMENT

ಪರಾರಿಯಾಗಿಲ್ಲ, ವ್ಯವಹಾರಕ್ಕಾಗಿ ಥಾಯ್ಲೆಂಡ್‌ಗೆ: ಗೋವಾ ನೈಟ್‌ಕ್ಲಬ್ ಮಾಲೀಕರು

ಪಿಟಿಐ
Published 11 ಡಿಸೆಂಬರ್ 2025, 5:08 IST
Last Updated 11 ಡಿಸೆಂಬರ್ 2025, 5:08 IST
<div class="paragraphs"><p>ತಾಳೆ ಎಲೆಗಳಿಂದ ನಿರ್ಮಿಸಿದ ತಾತ್ಕಾಲಿಕ ರಚನೆ ಇದಾಗಿತ್ತು. ಹಾಗಾಗಿ ಬೆಂಕಿ ಬೇಗನೇ ಹೊತ್ತಿಕೊಂಡಿತ್ತು</p></div>

ತಾಳೆ ಎಲೆಗಳಿಂದ ನಿರ್ಮಿಸಿದ ತಾತ್ಕಾಲಿಕ ರಚನೆ ಇದಾಗಿತ್ತು. ಹಾಗಾಗಿ ಬೆಂಕಿ ಬೇಗನೇ ಹೊತ್ತಿಕೊಂಡಿತ್ತು

   

(ಪಿಟಿಐ ಚಿತ್ರ)

ನವದೆಹಲಿ: ಗೋವಾ ನೈಟ್‌ಕ್ಲಬ್‌ ಬೆಂಕಿ ಅವಘಡ ಪ್ರಕರಣದಲ್ಲಿ ಮಾಲೀಕರು ಪರಾರಿಯಾಗಿದ್ದಾರೆ ಎಂಬ ಆರೋಪವನ್ನು ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ ವಕೀಲರು ನಿರಾಕರಿಸಿದ್ದಾರೆ. ಈ ಸಂಬಂಧ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ನಡುವೆ ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

'ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆಯೇ ಮಾಲೀಕರು ಥಾಯ್ಲೆಂಡ್‌ಗೆ ಪರಾರಿಯಾಗಿಲ್ಲ. ವ್ಯವಹಾರ ಕಾರಣಗಳಿಗಾಗಿ ಅಲ್ಲಿಗೆ ಹೋಗಿದ್ದರು' ಎಂದು ಲುತ್ರಾ ಸೋದರರ ಪರವಾಗಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

'ಲುತ್ರಾ ಸಹೋದರರು ನೈಟ್‌ಕ್ಲಬ್ ಪರವಾನಗಿ ಮಾತ್ರ ಹೊಂದಿದ್ದು, ನಿಜವಾದ ಮಾಲೀಕತ್ವವನ್ನು ಹೊಂದಿಲ್ಲ' ಎಂದೂ ವಾದಿಸಲಾಗಿದೆ.

ಗೋವಾ ನೈಟ್ ಕ್ಲಬ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 25 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

'ಗೋವಾಕ್ಕೆ ಮರಳುವುದು ನನ್ನ ಸುರಕ್ಷತೆಗೆ ಬೆದರಿಕೆಯಾಗಲಿದೆ. ನನ್ನ ಇತರೆ ರೆಸ್ಟೋರೆಂಟ್‌ಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿದೆ' ಎಂದು ನಾಲ್ಕು ವಾರಗಳ ರಕ್ಷಣೆ ಕೋರಿ ಸೌರಭ್ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಗೋವಾ ಪೊಲೀಸರ ಪ್ರತಿಕ್ರಿಯೆ ಕೇಳಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಂದನಾ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ವಶಕ್ಕೆ ಪಡೆಯಲು ಇಂಟರ್‌ಪೋಲ್, ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.

ಡಿಸೆಂಬರ್ 7ರಂದೇ ಪಲಾಯನ ಮಾಡಲು ಲುತ್ರಾ ಸಹೋದರರರು ಥಾಯ್ಲಂಡ್‌ಗೆ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಡಿಗೊ ವಿಮಾನದ ಮೂಲಕ ತೆರಳಿದ್ದರು ಎಂದು ತಿಳಿದು ಬಂದಿದೆ.

ಏತನ್ಮಧ್ಯೆ 'ಬರ್ಚ್ ಬೈ ರೋಮಿಯೊ ಲೇನ್' ನೈಟ್‌ಕ್ಲಬ್‌ನ ಮತ್ತೊಬ್ಬ ಮಾಲೀಕ ಅಜಯ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಲುಕ್ ಔಟ್ ನೋಟಿಸ್ (ಎಲ್‍ಒಸಿ) ಹೊರಡಿಸಲಾಗಿತ್ತು. 36 ಗಂಟೆಗಳ ಕಾಲ ಗೋವಾ ಪೊಲೀಸರ ವಶಕ್ಕೆ ನೀಡಲು ದೆಹಲಿ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ.