
ನವದೆಹಲಿ: ಉತ್ತರ ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದ ಭಾರಿ ಅಗ್ನಿ ಅವಘಡ ಸಂಬಂಧ ಕ್ಲಬ್‌ನ ಮಾಲೀಕರಾದ ಗೌರವ್ ಹಾಗೂ ಸೌರಭ್ ಲೂಥ್ರಾ ಅವರ ದೆಹಲಿಯ ಹಡ್ಸನ್ ಲೇನ್‌ನಲ್ಲಿರುವ ನಿವಾಸಕ್ಕೆ ಗೋವಾ ಪೊಲೀಸರ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.
ಈ ವೇಳೆ ಲೂಥ್ರಾ ಸಹೋದರರು ನಿವಾಸದಲ್ಲಿ ಇರಲಿಲ್ಲ. ಆರೋಪಿಗಳ ಚಲನವಲನ, ಸಂಭಾವ್ಯ ಅಡಗುತಾಣ ಹಾಗೂ ಸಂಪರ್ಕಗಳ ಬಗ್ಗೆ ಕುಟುಂಬದ ಸದಸ್ಯರನ್ನು ಪೊಲೀಸರು ಪ್ರಶ್ನಿಸಿದ್ದಾರೆ.
‘ಆರೋಪಿಗಳನ್ನು ಪತ್ತೆಹಚ್ಚಲು ಹಾಗೂ ಗೋವಾ ಪೊಲೀಸರ ತನಿಖೆಗೆ ನೆರವಾಗಲು ದೆಹಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಲಬ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಜೀವ್ ಮೋದಕ್, ಪ್ರಧಾನ ವ್ಯವಸ್ಥಾಪಕ ವಿವೇಕ್ ಸಿಂಗ್, ಬಾರ್ ವ್ಯವಸ್ಥಾಪಕ ರಾಜೀವ್ ಸಿಂಘಾನಿಯಾ ಹಾಗೂ ಗೇಟ್ ವ್ಯವಸ್ಥಾಪಕ ರಿಯಾಂಶು ಠಾಕೂರ್ ಅವರನ್ನು ಭಾನುವಾರವೇ ಬಂಧಿಸಲಾಗಿತ್ತು.
ನೈಟ್‌ಕ್ಲಬ್‌ನ ದೈನಂದಿನ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ದೆಹಲಿಯ ಸಾಬ್ಜಿ ಮಂಡಿ ನಿವಾಸಿ ಭರತ್ ಕೊಹ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಅಗ್ನಿ ಅವಘಡದಲ್ಲಿ 25 ಮಂದಿ ಸಜೀವ ದಹನವಾಗಿದ್ದು, ಆರು ಜನರು ಗಾಯಗೊಂಡಿದ್ದರು. ಮೃತರ ಪೈಕಿ 20 ಮಂದಿ ಕ್ಲಬ್‌ನ ಸಿಬ್ಬಂದಿ ಹಾಗೂ ಐವರು ಪ್ರವಾಸಿಗರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.