ADVERTISEMENT

‘ಕೈ’ ಕೊಟ್ಟ ಇಬ್ಬರು ಶಾಸಕರು ಕಮಲದಲ್ಲಿ ಲೀನ

ಗೋವಾದಲ್ಲಿ ಬಿಜೆಪಿ ಆಪರೇಷನ್‌ l ಸರ್ಕಾರ ರಚಿಸುವ ಕಾಂಗ್ರೆಸ್‌ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 18:48 IST
Last Updated 16 ಅಕ್ಟೋಬರ್ 2018, 18:48 IST
ಬಿಜೆಪಿಗೆ ಸೇರ್ಪಡೆಯಾದ ಸುಭಾಷ್‌ ಶಿರೋಡ್ಕರ್‌ ಹಾಗೂ ದಯಾನಂದ ಸೊಪ್ಟೆ ಅವರನ್ನು ರೈಲ್ವೆ ಸಚಿವ ಪೀಯುಷ್ ಗೋಯಲ್ ಅವರು ಪಕ್ಷಕ್ಕೆ ಸ್ವಾಗತಿಸಿದರು –ಪಿಟಿಐ ಚಿತ್ರ
ಬಿಜೆಪಿಗೆ ಸೇರ್ಪಡೆಯಾದ ಸುಭಾಷ್‌ ಶಿರೋಡ್ಕರ್‌ ಹಾಗೂ ದಯಾನಂದ ಸೊಪ್ಟೆ ಅವರನ್ನು ರೈಲ್ವೆ ಸಚಿವ ಪೀಯುಷ್ ಗೋಯಲ್ ಅವರು ಪಕ್ಷಕ್ಕೆ ಸ್ವಾಗತಿಸಿದರು –ಪಿಟಿಐ ಚಿತ್ರ   

ಪಣಜಿ/ನವದೆಹಲಿ: ಗೋವಾ ರಾಜಕಾರಣದಲ್ಲಿ ಮಂಗಳವಾರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಶಾಸಕರಿಬ್ಬರು ತಮ್ಮ ಶಾಸಕ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿ ಸೇರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕರಾದ ದಯಾನಂದ ಸೊಪ್ಟೆ ಮತ್ತು ಸುಭಾಷ್‌ ಶಿರೋಡ್ಕರ್‌ ದೆಹಲಿಯಿಂದಲೇ ಫ್ಯಾಕ್ಸ್‌ ಮೂಲಕ ಗೋವಾ ವಿಧಾನಸಭೆಯ ಸ್ಪೀಕರ್‌ ಪ್ರಮೋದ್‌ ಸಾವಂತ್‌ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಬ್ಬರ ರಾಜೀನಾಮೆಯೂ ಅಂಗೀಕಾರವಾಗಿದೆ ಎಂದು ಸ್ಪೀಕರ್‌ ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನುದೆಹಲಿಯಲ್ಲಿ ಮಂಗಳವಾರ ಭೇಟಿಯಾದ ಇಬ್ಬರೂ ಶಾಸಕರು ಬಿಜೆಪಿ ಸೇರುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

‘ಇನ್ನೂ ಮೂರ‍್ನಾಲ್ಕು ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆಶೀಘ್ರ ಸೇರಲಿದ್ದಾರೆ’ ಎಂದು ಅವರು ಸುಳಿವು ನೀಡಿದ್ದಾರೆ. ಇದರೊಂದಿಗೆ 40 ಸದಸ್ಯರ ಗೋವಾ ವಿಧಾನಸಭೆಯಲ್ಲಿ 16 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್‌ ಬಲ 14ಕ್ಕೆ ಕುಸಿದಿದೆ.

ADVERTISEMENT

ಮುಖ್ಯಮಂತ್ರಿ ಮನೋಹರ್‌ ಪರ್‍ರೀಕರ್‌ ಅನಾರೋಗ್ಯದಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾದ ನಂತರ ಸರ್ಕಾರ ರಚಿಸಲು ಮುಂದಾಗಿದ್ದ ಕಾಂಗ್ರೆಸ್‌ನ ಕನಸು ಈಗ ಭಗ್ನವಾಗಿದೆ.

ದೆಹಲಿಯಲ್ಲಿ ನಿರ್ಧಾರ

ಶಾಸಕರಾದ ಸೊಪ್ಟೆ ಮತ್ತು ಶಿರೋಡ್ಕರ್‌ ಸೋಮವಾರ ರಾತ್ರಿ ಏಕಾಏಕಿ ದೆಹಲಿಗೆ ಧಾವಿಸಿದ ಬೆನ್ನಲ್ಲೇ ಇಬ್ಬರೂ ಬಿಜೆಪಿ ಸೇರುವ ಸುದ್ದಿ ದಟ್ಟವಾಗಿತ್ತು.

ಆದರೆ, ಬಿಜೆಪಿಯಾಗಲಿ ಅಥವಾ ಶಾಸಕರಾಗಲಿ ಈ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದು ಅವರು ಪಕ್ಷ ತೊರೆಯುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದರು.

ಅನಾರೋಗ್ಯದಿಂದ ಪರ್‍ರೀಕರ್‌ ರಾಜೀನಾಮೆ ಸಲ್ಲಿಸಿದರೆ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಅವರು ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಗೆ ಕರೆದೊಯ್ದಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಎ. ಚೆಲ್ಲಕುಮಾರ್‌ ಆರೋಪಿಸಿದ್ದಾರೆ.

ಸರ್ಕಾರ ರಚನೆಗೆ ಹಕ್ಕು ಮಂಡಿಸಿ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್ ಚೋಡನ್ಕರ್‌ ಅವರು ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ.

ಪರ್‍ರೀಕರ್‌ಗೆ ಮನೆಯಲ್ಲೇ ಚಿಕಿತ್ಸೆ

ದೆಹಲಿಯ ಏಮ್ಸ್‌ ಆಸ್ಪತ್ರೆಯಿಂದ ವಾಪಸಾಗಿರುವ ಮುಖ್ಯಮಂತ್ರಿ ಮನೋಹರ್‌ ಪರ್‍ರೀಕರ್‌ ಅವರು ದೋನಾ ಪೌಲ್‌ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ.

ಗೋವಾ ವೈದ್ಯಕೀಯ ಕಾಲೇಜಿನ ವೈದ್ಯರು ಮನೆಯಲ್ಲಿಯೇ ಪರ್‍ರೀಕರ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ (ಎಂಜಿಪಿ) ಹಿರಿಯ ನಾಯಕ ಸುದಿನ್‌ ಧಾವ್ಲಿಕರ್‌ ಮತ್ತು ಗೋವಾ ಫಾರ್‌ವರ್ಡ್‌ ಬ್ಲಾಕ್‌ ನಾಯಕ ವಿಜಯ್‌ ಸರ್‌ದೇಸಾಯಿ ಕೂಡ ಮುಖ್ಯಮಂತ್ರಿ ಹುದ್ದೆ ಕನಸು ಕಾಣುತ್ತಿದ್ದಾರೆ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಮತ್ತು ಗೋವಾ ಫಾರ್‌ವರ್ಡ್‌ ಬ್ಲಾಕ್‌ ತಲಾ ಮೂವರು ಶಾಸಕರನ್ನು ಹೊಂದಿದ್ದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲಿಸಿದ್ದಾರೆ.

‘ಶಾಸಕರಿಗೆ ಬಿಜೆಪಿ ಬೆದರಿಕೆ’

ಆಡಳಿತಾರೂಢ ಬಿಜೆಪಿ ‘ಹಣಬಲ ಮತ್ತು ಬೆದರಿಕೆ ತಂತ್ರ’ ಬಳಸುವ ಮೂಲಕ ಕಾಂಗ್ರೆಸ್‌ ಶಾಸಕರನ್ನು ಸೆಳೆಯುತ್ತಿದೆ ಎಂದು ಗೋವಾ ಕಾಂಗ್ರೆಸ್‌ ಆರೋಪಿಸಿದೆ.

ಬಿಜೆಪಿ ಸರ್ಕಾರ ಉಳಿಸಿ
ಕೊಳ್ಳುವ ತಂತ್ರಗಾರಿಕೆಯ ಭಾಗವಾಗಿ ಕಾಂಗ್ರೆಸ್‌ ಒಡೆಯುವ ಯತ್ನಕ್ಕೆ ಕೈ ಹಾಕಿದೆ ಎಂದು ಗೋವಾ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಚೋಡನ್ಕರ್‌ ಆರೋಪಿಸಿದ್ದಾರೆ.

‘ಕಾಂಗ್ರೆಸ್‌ನ ಎಲ್ಲ 14 ಶಾಸಕರು ಪಕ್ಷದೊಂದಿಗೆ ಇದ್ದು, ಬೇರೆ ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಇಲ್ಲ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಮೇಲೆ ರಾಣೆ ಕಣ್ಣು

2017ರಲ್ಲಿ ಗೋವಾ ವಿಧಾನಸಭೆಯ 40 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಆದರೆ, ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ವಿಶ್ವಜಿತ್‌ ರಾಣೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಸೇರಿದ್ದರು. ಸದ್ಯ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ರಾಣೆ, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಮೂಲತಃ ಕಾಂಗ್ರೆಸ್‌ನಲ್ಲಿದ್ದ ರಾಣೆ ಅವರು ಹಳೆಯ ಸ್ನೇಹ, ಸಂಬಂಧ ಬಳಸಿಕೊಂಡು ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಗೆ ಸೆಳೆಯುತ್ತಿದ್ದಾರೆ. ಸದ್ಯ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಇಬ್ಬರು ಶಾಸಕರನ್ನು ಬಿಜೆಪಿಗೆ ಕರೆತಂದದ್ದು ಇದೇ ರಾಣೆ ಎಂದು ಹೇಳಲಾಗಿದೆ.

ಕುಗ್ಗದ ಕಾಂಗ್ರೆಸ್‌ ವಿಶ್ವಾಸ

ಇಬ್ಬರು ಶಾಸಕರ ರಾಜೀನಾಮೆಯ ಹೊರತಾಗಿಯೂ ಸರ್ಕಾರ ರಚನೆಯ ಯತ್ನವನ್ನು ಕಾಂಗ್ರೆಸ್‌ ಕೈಬಿಟ್ಟಿಲ್ಲ. ಶಾಸಕರ ರಾಜೀನಾಮೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚಿಸುವ ಯತ್ನ ಮುಂದುವರಿಯಲಿದೆ ಎಂದು ಕಾಂಗ್ರೆಸ್‌ ವಕ್ತಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

***

* ಮಾಂಡ್ರೆಮ್‌ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಲಕ್ಷ್ಮಿಕಾಂತ್‌ ಪರ್ಸೇಕರ್‌ ಅವರನ್ನು ಸೋಲಿಸಿದ್ದ ಕಾಂಗ್ರೆಸ್‌ನ ದಯಾನಂದ್‌ ಸೊಪ್ಟೆ

* ಶಿರೋಡ್‌ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುಭಾಷ್‌ ಶಿರೋಡ್ಕರ್‌

***

ಇಬ್ಬರೂ ಶಾಸಕರ ರಾಜೀನಾಮೆ ಅಂಗೀಕಾರವಾಗಿದ್ದು ಮುಂದಿನ ಪ್ರಕ್ರಿಯೆಗಾಗಿ ರಾಜ್ಯಪಾಲರು ಮತ್ತು ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು

ಪ್ರಮೋದ್‌ ಸಾವಂತ್‌, ಗೋವಾ ವಿಧಾನಸಭೆಯ ಸ್ಪೀಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.