ADVERTISEMENT

ಗೋವಾ ಚಿತ್ರೋತ್ಸವ ಇಂದು ಆರಂಭ: ಮಾಂಡವಿ ನದಿ ದಂಡೆಯ ಉದ್ದಕ್ಕೂ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:14 IST
Last Updated 20 ನವೆಂಬರ್ 2025, 0:14 IST
   

ಪಣಜಿ: ಕಳೆದ ಕೆಲವು ವರ್ಷಗಳಿಂದ ಒಳಾಂಗಣದಲ್ಲಿ ನಡೆಯುತ್ತಿದ್ದ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಈ ವರ್ಷ ಹೊರಾಂಗಣದಲ್ಲಿ ನಡೆಯಲಿದೆ.

ಪಣಜಿಯ ದಯಾನಂದ ಬಾಂದೋಡ್ಕರ್‌ ರಸ್ತೆಯಲ್ಲಿರುವ ಗೋವಾ ಸರ್ಕಾರದ ಹಳೇ ಸಚಿವಾಲಯದ ಮುಂಭಾಗದಲ್ಲಿ ಗುರುವಾರ ಸಂಜೆ ವರ್ಣರಂಜಿತ ಮೆರವಣಿಗೆಯ ಉದ್ಘಾಟನೆಯೊಂದಿಗೆ ಚಿತ್ರೋತ್ಸವ ಆರಂಭವಾಗಲಿದೆ. ಇದು ಐವತ್ತಾರನೇಯ ಚಿತ್ರೋತ್ಸವ.

ಕೇಂದ್ರ ಪ್ರಸಾರ ಖಾತೆ ರಾಜ್ಯ ಸಚಿವ ಎಲ್‌ ಮುರುಗನ್‌, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಭಾರತೀಯ ಸಿನಿಮಾರಂಗದ ಗಣ್ಯರು, ಚಿತ್ರೋತ್ಸವದ ಸಂಘಟಕರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ADVERTISEMENT

ಮಾಂಡವಿ ನದಿ ದಂಡೆಯ ಉದ್ದಕ್ಕೂ ಮೂರೂವರೆ ಕಿಲೋಮೀಟರ್‌ ಕ್ರಮಿಸುವ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು, ನೃತ್ಯ ಮತ್ತು ಗಾಯನ ಕಲಾವಿದರು ಪಾಲ್ಗೊಳ್ಳುವರು. ಭಾರತೀಯ ಸಿನಿಮಾದ ಹೆಜ್ಜೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಮೆರವಣಿಗೆ ವೀಕ್ಷಿಸಲು ಸಾವಿರಾರು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಾ ಅಕಾಡೆಮಿ ಬಳಿ ಮೆರವಣಿಗೆ ಕೊನೆಗೊಳ್ಳಲಿದೆ.

ಉದ್ಘಾಟನೆಯ ನಂತರ ಪಣಜಿ, ಮಡಗಾಂವ್‌, ಪೊರ್ವರಿಂಗಳ ಹದಿಮೂರು ತೆರೆಗಳಲ್ಲಿ ಬ್ರೆಜಿಲ್‌ ದೇಶದ, ಗೇಬ್ರಿಯಲ್‌ ಮಸ್ಕಾರೊ ನಿರ್ದೇಶನದ ದಿ ಬ್ಲೂ ಟ್ರಯಲ್‌ ಚಿತ್ರ ಪ್ರದರ್ಶನಗೊಳ್ಳಲಿದೆ.

ನ.21ರಿಂದ 28ರ ವರೆಗೆ 81 ದೇಶಗಳ 240 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಜಪಾನ್‌, ಚಿತ್ರೋತ್ಸದ ಪೋಕಸ್‌ ರಾಷ್ಟ್ರವಾಗಿದ್ದು, ಆ ದೇಶದ ಆರು ಚಿತ್ರಗಳಲ್ಲದೆ ಸ್ಪೇನ್‌ ಮತ್ತು ಆಸ್ಟ್ರೇಲಿಯಾ ದೇಶಗಳ ಚಿತ್ರಗಳ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರೋತ್ಸವದಲ್ಲಿ 44 ವಿದೇಶಿ ಮತ್ತು 13 ಭಾರತೀಯ ಸಿನಿಮಾಗಳ ಮೊದಲ (ಪ್ರೀಮಿಯರ್‌) ಪ್ರದರ್ಶನಗಳು ನಡೆಯಲಿವೆ.

ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ವನ್ಯ (ನಿ:ದೇವೇಂದ್ರ ಬಡಿಗೇರ್‌), ಸು ಫ್ರಮ್‌ ಸೋ (ನಿ:ಪ್ರಕಾಶ್‌ ಜೆ ಪಿ ತುಮಿನಾಡ್‌) ಮತ್ತು ತುಳು ಭಾಷೆಯ ಇಂಬು (ನಿ:ಶಿವಧ್ವಜ್‌ ಶೆಟ್ಟಿ) ಸೇರಿದಂತೆ ಒಟ್ಟು 20 ಕಥಾಚಿತ್ರಗಳು ಮತ್ತು 20 ನಾನ್‌ಫೀಚರ್‌ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ತಮಿಳಿನ ಅಮರನ್‌ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿದ್ದು, ಅದು ಸ್ಪರ್ಧಾ ವಿಭಾಗದಲ್ಲೂ ಸ್ಥಾನ ಪಡೆದಿದೆ. ಈ ವಿಭಾಗದಲ್ಲಿ 15 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಭಾರತೀಯ ಸಿನಿಮಾರಂಗಕ್ಕೆ ವಿಶೇಷ ಕೊಡುಗೆ ನೀಡಿದ ಮತ್ತು ಈ ವರ್ಷ ಶತಮಾನೋತ್ಸವ ವರ್ಷಾಚರಣೆ ನಡೆಯುತ್ತಿರುವ ನಟ ನಿರ್ದೇಶಕ ಗುರುದತ್‌, ನಿರ್ಮಾಪಕ, ನಿರ್ದೇಶಕ ರಾಜ್‌ಕೋಸ್ಲಾ, ಹೊಸ ಅಲೆಯ ಚಿತ್ರಗಳ ನಿರ್ದೇಶಕ ಋತ್ವಿಕ್‌ ಘಟಕ್‌, ತೆಲುಗು ನಟಿ ಪಿ. ಭಾನುಮತಿ, ಸಂಗೀತ ನಿರ್ದೇಶಕರಾದ ಭೂಪೇನ್‌ ಹಜಾರಿಕಾ ಮತ್ತು ಸಲೀಲ್‌ ಚೌಧರಿ ಅವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ನ.28ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕಳೆದ 50 ವರ್ಷಗಳ ಸಿನಿಮಾ ಸಾಧನೆಗಾಗಿ ನಾಯಕ ನಟರಾದ ರಜನಿಕಾಂತ್‌ ಮತ್ತು ನಂದಮೂರಿ ಬಾಲಕೃಷ್ಣ ಅವರನ್ನು ಗೌರವಿಸುವ ಕಾರ್ಯಕ್ರಮವಿದೆ. ಉಳಿದಂತೆ ಫಿಲಂ ಬಜಾರ್‌ ಮತ್ತು ಭವಿಷ್ಯದ ಸಿನಿಮಾ ಪ್ರತಿಭಾವಂತರ ಜತೆ ವಿಚಾರ ವಿನಿಮಯ ಮತ್ತು ಸಿನಿಮಾ ಕುರಿತು ಸಂವಾದ, ಚರ್ಚೆಗಳಿಗೆ ವೇದಿಕೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.