ADVERTISEMENT

ಇಲಾಖೆಗಳ ಮುಖ್ಯಸ್ಥರು PM ಮೋದಿಯ Mann ki Baat ಕೇಳುವುದು ಕಡ್ಡಾಯ: ಗೋವಾ ಸರ್ಕಾರ

ಪಿಟಿಐ
Published 9 ಜನವರಿ 2025, 14:33 IST
Last Updated 9 ಜನವರಿ 2025, 14:33 IST
<div class="paragraphs"><p>ಮನ್ ಕಿ ಬಾತ್</p></div>

ಮನ್ ಕಿ ಬಾತ್

   

ಪಣಜಿ: ಪ್ರಧಾನಮಂತ್ರಿ ಅವರು ತಿಂಗಳಿಗೊಮ್ಮೆ ನಡೆಸಿಕೊಡುವ ರೇಡಿಯೊ ಕಾರ್ಯಕ್ರಮ ‘ಮನ್‌ ಕಿ ಬಾತ್‌’ ಕೇಳುವುದನ್ನು ಗೋವಾದಲ್ಲಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಗುರುವಾರ ಕಡ್ಡಾಯಗೊಳಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಸರ್ಕಾರ, ‘ಕಾರ್ಯಕ್ರಮದಲ್ಲಿ ಉತ್ತಮ ಆಡಳಿತ ಕುರಿತ ಹಲವು ಸ್ಫೂರ್ತಿದಾಯಕ ಮಾತುಗಳಿರುತ್ತವೆ. ಅವುಗಳ ಅನುಷ್ಠಾನದಿಂದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಾಧ್ಯ’ ಎಂದು ಹೇಳಿದೆ.

ADVERTISEMENT

ಈ ವಿಷಯ ಕುರಿತು ಮಾಹಿತಿ ಹಂಚಿಕೊಂಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ಕುರಿತು ಸಾರ್ವಜನಿಕರ ಗಮನ ಸೆಳೆಯುವ ಹೊಸ ಬಗೆಯ ಆಲೋಚನೆಗಳನ್ನು ಮನ್‌ ಕಿ ಬಾತ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇವುಗಳನ್ನು ಅನುಷ್ಠಾನಗೊಳಿಸುವುದರಿಂದ ಪ್ರತಿಯೊಬ್ಬ ವ್ಯಕ್ತಿ ಹಾಗೂ ಸಾಮೂಹಿಕ ಪ್ರಯತ್ನದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ.

‘ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಹಲವು ಉತ್ತಮ ನೈಜ ಕಥೆ ಹಾಗೂ ಪದ್ಧತಿಗಳು ನಮಗೆ ಸ್ಫೂರ್ತಿಯಾಗಲಿವೆ. ಇವುಗಳು ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲಿವೆ. ಇದರಿಂದ ಸರ್ಕಾರದಲ್ಲೂ ಬದಲಾವಣೆ ತರಲು ಸಾಧ್ಯವಿದೆ. ಆ ಮೂಲಕ ಗೋವಾದಲ್ಲಿ ಜನರಿಗೆ ಲಭ್ಯವಾಗುವ ಸೇವೆಗಳು ಉತ್ತಮ ಗುಣಮಟ್ಟದ್ದಾಗಿರಲಿದೆ’ ಎಂದಿದ್ದಾರೆ.

‘ಅಭಿವೃದ್ಧಿ ಹೊಂದಿದ ಗೋವಾ ರಾಜ್ಯ ನಿರ್ಮಾಣಕ್ಕಾಗಿ ‘ಸ್ವಯಂಪೂರ್ಣ’ ಎಂಬ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಗೋವಾದಲ್ಲಿ ಜೀವನ ನಡೆಸುವುದು, ವ್ಯವಹಾರ ಕೈಗೊಳ್ಳುವುದನ್ನು ಸರಳೀಕರಣಗೊಳಿಸುವ ಮೂಲಕ ವಿಕಸಿತ ಗೋವಾ ನಿರ್ಮಾಣಕ್ಕೆ ನಾಂದಿ ಹಾಡಲಾಗುವುದು. ಜತೆಗೆ ಸಮುದಾಯ ಆಧಾರಿತ ಕ್ರಿಯಾ ಯೋಜನೆ ಮೂಲಕ ಪ್ರತಿಯೊಂದು ಗ್ರಾಮ ಹಾಗೂ ನಗರಗಳನ್ನು ಸ್ವಾವಲಂಬಿಯಾಗಿಸುವ ಗುರಿಯನ್ನು ಹೊಂದಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.