ADVERTISEMENT

ನೇತಾಜಿ, ಆರ್‌ಎಸ್‌ಎಸ್‌ನ ಗುರಿ ಒಂದೇ: ಭಾಗವತ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 17:02 IST
Last Updated 23 ಜನವರಿ 2023, 17:02 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌    

ಕೋಲ್ಕತ್ತ : ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಹೊಂದಿದ್ದ ಗುರಿ ಮತ್ತು ಆರ್‌ಎಸ್‌ಎಸ್‌ ಹೊಂದಿರುವ ಗುರಿ ಒಂದೇ ಆಗಿದೆ. ಅದು ಭಾರತವನ್ನು ಮಹಾನ್‌ ದೇಶವಾಗಿ ಕಟ್ಟುವುದು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮತ್ತು ನೇತಾಜಿ ಅವರ ಆದರ್ಶಗಳು ಪರಸ್ಪರ ವ್ಯತಿರಿಕ್ತ ಎಂಬ ಅಭಿಪ್ರಾಯವನ್ನು ನೇತಾಜಿ ಅವರ ಮಗಳು ಅನಿತಾ ಬೋಸ್‌ ಫಫ್‌ ಇತ್ತೀಚೆಗೆ ವ್ಯಕ್ತಪಡಿಸಿದ್ದರು.

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಅವರ ಕೊಡುಗೆಗಳನ್ನು ಭಾಗವತ್‌ ಕೊಂಡಾಡಿದರು. ಎಲ್ಲರೂ ನೇತಾಜಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಭಾರತವನ್ನು ವಿಶ್ವಗುರು
ವಾಗಿಸುವ ದಿಸೆಯಲ್ಲಿ ಕೆಲಸ ಮಾಡಬೇಕು ಎಂದರು.

ADVERTISEMENT

ಇಲ್ಲಿನ ಶಹೀದ್‌ ಮಿನಾರ್ ಮೈದಾನದಲ್ಲಿ ಆರ್‌ಎಸ್‌ಎಸ್‌ ಆಯೋಜಿಸಿದ ನೇತಾಜಿ ಅವರ 126ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವತ್‌ ಮಾತನಾಡಿದರು. ‘ಸುಭಾಸ್‌ ಬಾಬು (ನೇತಾಜಿ) ಅವರು ಮೊದಲಿಗೆ ಕಾಂಗ್ರೆಸ್‌ ಜೊತೆಗೇ ಇದ್ದರು. ಸತ್ಯಾಗ್ರಹದ ಹಾದಿಯನ್ನು ಅನುಸರಿಸಿದ್ದರು. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಇಷ್ಟು ಸಾಲದು ಎಂಬುದು ಅರಿವಾದಾಗ, ಭಿನ್ನ ಹಾದಿ ಹಿಡಿದರು. ಸನ್ನಿವೇಶಗಳು ಮತ್ತು ದಾರಿಗಳು ಭಿನ್ನವಾಗಿದ್ದರೂ ಗುರಿ ಒಂದೇ. ನಮ್ಮ ಮುಂದೆ ಅವರ ಆದರ್ಶಗಳು ಇವೆ. ಅವರು ಹೊಂದಿದ್ದ ಗುರಿಗಳು ನಮ್ಮದೂ ಆಗಿವೆ ಎಂದರು. ಭಾರತವು ಜಗತ್ತಿನ ಸಣ್ಣ ರೂಪ. ಭಾರತವು ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ನೇತಾಜಿ ಹೇಳಿದ್ದರು. ಆ ದಿಸೆಯಲ್ಲಿ ಕೆಲಸ ಮಾಡೋಣ’ ಎಂದು ಭಾಗವತ್‌ ಹೇಳಿದ್ದಾರೆ.

***

ಮಾರ್ಗಗಳು ಭಿನ್ನವಾಗಿ ಇರಬಹುದು. ಅವುಗಳನ್ನು ಸಿದ್ಧಾಂತಗಳೆಂದು ವಿವರಿಸುತ್ತಾರೆ. ಅವು ಬೇರೆ ಬೇರೆಯಾಗಿಯೇ ಇದ್ದರೂ ಗುರಿ ಎಂಬುದು ಮುಖ್ಯ

- ಮೋಹನ್‌ ಭಾಗವತ್‌, ಆರ್‌ಎಸ್‌ಎಸ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.