
ಕಳೆದ ಕೆಲ ತಿಂಗಳಿನಿಂದ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬಂಗಾರ ಬಲು ಭಾರ ಎನ್ನುವಂತಾಗಿದೆ. ಭಾರತದಲ್ಲಿ ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳಲ್ಲಿ ಬಂಗಾರವು ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಈಗ ಬಂಗಾರದ ಹೆಸರು ಕೇಳಿದರೇನೆ ಬೆಚ್ಚಿಬೀಳುವಂತಾಗಿದೆ. ಬಡವರು, ಮಧ್ಯಮ ವರ್ಗದವರಂತೂ ಚೂರುಪಾರು ಕೊಳ್ಳುವುದಕ್ಕೂ ಕಷ್ಟ ಎನ್ನುವಂತಾಗಿದೆ.
ಅಂದಹಾಗೆ, ಎಂದೂ ಇಲ್ಲದ್ದು ಈಗ ಏಕೆ ಚಿನ್ನದ ಬೆಲೆ ವಿಪರೀತ ಏರುತ್ತಿದೆ ಎನ್ನುವುದನ್ನು ನೋಡುವುದಾರೆ, ಇದರ ಹಿಂದೆ ಚೀನಾದ ಕೈವಾಡವಿದೆ ಎನ್ನುತ್ತಾರೆ ಕೆಲ ವಿಶ್ಲೇಷಕರು.
ಇತ್ತೀಚಿನ ವಾರಗಳಲ್ಲಿ ಚಿನ್ನದ ಬೆಲೆಯಲ್ಲಿನ ದಿಢೀರ್ ಏರಿಳಿತಗಳು ಚೀನಾದ ಚಿನ್ನದ ವ್ಯಾಪಾರದೊಂದಿಗೆ ಸಂಬಂಧ ಹೊಂದಿವೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು, ಚಿನ್ನದ ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಚೀನಾದ ಅನಿಯಂತ್ರಿತ ಚಟುವಟಿಕೆಯಿಂದಾಗಿ ಬೆಲೆ ವ್ಯತ್ಯಾಸ ವೇಗ ಪಡೆದಿದೆ ಎಂದು ಹೇಳಿದ್ದಾರೆ.
ಜನವರಿ 29ರಂದು ಅಂತರರಾಷ್ಟ್ರೀಯ ಖರೀದಿಯಲ್ಲಿ ಚಿನ್ನದ ಬೆಲೆಯು ಔನ್ಸ್‌ಗೆ 5,594 ಡಾಲರ್‌ಗೆ ಏರಿಕೆಯಾಗಿ ದಾಖಲೆ ಬರೆದಿತ್ತು. ಬಳಿಕ, ಮರುದಿನ ದಶಕಗಳಲ್ಲೇ ತೀವ್ರ ಕುಸಿತದಲ್ಲಿ ಸುಮಾರು ಶೇ10 ರಷ್ಟು ಕುಸಿಯಿತು.
ಅಮೆರಿಕದ ಬಡ್ಡಿದರದ ನಿರೀಕ್ಷೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಅಂಶಗಳು ಚಿನ್ನದ ಬೇಡಿಕೆಯನ್ನು ಹೆಚ್ಚಿಸುತ್ತಲೇ ಇದ್ದರೂ, ಕೆಲವು ವಿಶ್ಲೇಷಕರು ಚೀನಾದ ಚಿಲ್ಲರೆ ಮತ್ತು ಸಾಂಸ್ಥಿಕ ಹೂಡಿಕೆದಾರರು ಏರಿಳಿತವನ್ನು ಉಲ್ಬಣಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ನಂಬುತ್ತಾರೆ.
ಫಾಕ್ಸ್ ನ್ಯೂಸ್ ಜೊತೆ ಮಾತನಾಡಿರುವ ಬೆಸೆಂಟ್, ಚೀನಾದಲ್ಲಿ ಚಿನ್ನದ ಖರೀದಿ ವ್ಯವಹಾರ ಅನಿಯಂತ್ರಿತವಾಗಿದೆ ಎನ್ನುತ್ತಾರೆ.
ಚಿನ್ನದ ಫ್ಯೂಚರ್ಸ್ ಮತ್ತು ವಿನಿಮಯ ವಹಿವಾಟು ನಿಧಿಗಳಲ್ಲಿ ಹೆಚ್ಚುತ್ತಿರುವ ಚಟುವಟಿಕೆ, ಬೆಲೆ ಹೆಚ್ಚಳದ ನಡುವೆಯೂ ಚಿನ್ನದ ವ್ಯಾಪಕ ಖರೀದಿ ಕಂಡುಬರುತ್ತಿದೆ ಎಂದು ಮಾರುಕಟ್ಟೆ ವೀಕ್ಷಕರು ಹೇಳಿದ್ದಾರೆ.
ಈ ಹಳದಿ ಲೋಹದ ಬೆಲೆ ವ್ಯತ್ಯಾಸಗಳ ಮೇಲೆ ಪ್ರಬಲ ಪರಿಣಾಮ ಬೀರುತ್ತಿರುವ ದೇಶ ಚೀನಾ ಆಗಿದೆ ಎಂದು ಎಂಕೆಎಸ್ ಪ್ಯಾಂಪ್‌ನ ಸಂಶೋಧನೆ ಮತ್ತು ಲೋಹಗಳ ಕಾರ್ಯತಂತ್ರದ ಮುಖ್ಯಸ್ಥರಾದ ನಿಕಿ ಶೀಲ್ಸ್ ಹೇಳಿದ್ದಾರೆ.
ಕ್ಯಾಪಿಟಲ್ ಎಕನಾಮಿಕ್ಸ್ ಒದಗಿಸಿದ ಮಾಹಿತಿಯ ಪ್ರಕಾರ, 2025ರ ಆರಂಭದಿಂದ ಚೀನಾದ ಚಿನ್ನದ ಬೆಂಬಲಿತ ಇಟಿಎಫ್ ದ್ವಿಗುಣಗೊಂಡಿವೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಗೋಲ್ಡ್ ಫ್ಯೂಚರ್ಸ್ ವ್ಯಾಪಾರ ಚಟುವಟಿಕೆ ತೀವ್ರವಾಗಿ ಹೆಚ್ಚಾಗಿದೆ.
‘ಚೀನಾದಲ್ಲಿ ಫ್ಯೂಚರ್ಸ್ ಕಾಂಟ್ರಾಕ್ಟ್ಸ್ ಮತ್ತು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ನಂತಹ(ಇಟಿಎಫ್) ಚಿನ್ನ ಸಂಬಂಧಿತ ಹಣಕಾಸು ವ್ಯವಹಾರಗಳಿಗೆ ಹೆಚ್ಚುತ್ತಿರುವ ಪ್ರವೇಶದಿಂದಾಗಿ ಈ ಬೆಲೆ ವ್ಯತ್ಯಾಸ ಕಂಡುಬರುತ್ತಿದೆ’ಎಂದು ಕ್ಯಾಪಿಟಲ್ ಎಕನಾಮಿಕ್ಸ್‌ನ ಅರ್ಥಶಾಸ್ತ್ರಜ್ಞ ಅಹಮದ್ ಹುಸೇನ್ ಹೇಳಿದ್ದಾರೆ. ಇದಲ್ಲದೆ, ಚೀನಾದ ಚಿನ್ನದ ಮಾರುಕಟ್ಟೆಯಲ್ಲಿಯೂ ಗಮನಾರ್ಹ ಪ್ರಮಾಣದ ಏರಿಳಿತ ಕಂಡುಬರುತ್ತಿದೆ ಎಂದಿದ್ದಾರೆ.
ಶಾಂಘೈ ಫ್ಯೂಚರ್ಸ್ ಎಕ್ಸ್‌ಚೇಂಜ್‌ನ ಗಾತ್ರ ಏರಿಕೆಯಾಗಿದೆ. ಸರಾಸರಿ ದಿನಕ್ಕೆ 540 ಟನ್‌ಗಳನ್ನು ತಲುಪಿದೆ ಎಂದು ಉದ್ಯಮ ತಜ್ಞರಾದ ರಾಯ್ ಜಿಯಾ ತಿಳಿಸಿದ್ದಾರೆ.
‘ಹೂಡಿಕೆಗೆ ಸುರಕ್ಷಿತ ತಾಣಗಳನ್ನು ಹುಡುಕುತ್ತಿರುವ ಚೀನಾ ಹೂಡಿಕೆದಾರರಿಗೆ ಗೋಲ್ಡ್ ಫ್ಯೂಚರ್ ಕಾಂಟ್ರಾಕ್ಟ್ಸ್ ಹೆಚ್ಚಳವು ಅನುಕೂಲವಾಗಿದೆ’ಎಂದು ತಜ್ಞರು ಹೇಳಿದ್ದಾರೆ.
'ಚೀನಾದ ಜನರು ಹಣಕಾಸು ಮಾರುಕಟ್ಟೆಗೆ ಸೀಮಿತ ಪ್ರವೇಶವನ್ನು ಹೊಂದಿದ್ದಾರೆ. ಅವರು ಆಸ್ತಿ, ಠೇವಣಿ ಇತ್ಯಾದಿಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ಆದರೆ, ಈಗ ವಸತಿ ವಲಯದ ಬೆಲೆಗಳು ಕುಸಿದಿದ್ದು, ಠೇವಣಿ ದರವು ಶೇ 1ರಷ್ಟು ರಷ್ಟು ಕಡಿಮೆಯಾಗಿದೆ. ಹಾಗಾಗಿ, ಚಿನ್ನದ ಮೇಲೆ ಹೂಡಿಕೆಯು ಅವರಿಗೆ ಉತ್ತಮ ಪರ್ಯಾಯವಾಗಿದೆ’ಎಂದು ANZ ಸಂಶೋಧನೆಯ ಹಿರಿಯ ಚೀನಾ ತಂತ್ರಜ್ಞ ಝಾವೊಪೆಂಗ್ ಕ್ಸಿಂಗ್ ಹೇಳಿದ್ದಾರೆ.
ANZ ಸಂಶೋಧನೆಯ ದತ್ತಾಂಶದ ಪ್ರಕಾರ, ಪ್ರಸ್ತುತ ಚಿನ್ನವು ಚೀನಾದ ಪ್ರತಿ ಮನೆಯ ಆಸ್ತಿ ಪೈಕಿ ಸುಮಾರು ಶೇ 1 ರಷ್ಟುಇದೆ. ಮುಂದಿನ ದಿನಗಳಲ್ಲಿ ಅದು ಶೇ 5ಕ್ಕೆ ಏರುವ ನಿರೀಕ್ಷೆ ಇದೆ. ವಿಶೇಷವಾಗಿ ಕುಸಿತ ಕಂಡ ರಿಯಲ್ ಎಸ್ಟೇಟ್ ವಲಯ ಮತ್ತು ಠೇವಣಿ ದರಗಳು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತಲುಪುತ್ತಿರುವಾಗ ಚಿನ್ನವು ವಿಮೆಯ ಪಾತ್ರ ವಹಿಸುತ್ತದೆ ಎಂದು ಅಲ್ಲಿನ ಜನರು ನಂಬುತ್ತಾರೆ ಎನ್ನುತ್ತಾರೆ ತಜ್ಞರು.
ಇದರ ಜೊತೆಗೆ, ಜಾಗತಿಕ ಕರೆನ್ಸಿ ಎಂದು ಕರೆಸಿಕೊಳ್ಳುವ ಡಾಲರ್ ಮೇಲಿನ ಅವಲಂಬನೆ ತಪ್ಪಿಸುವ ಕಾರ್ಯತಂತ್ರವೂ ಇದರಲ್ಲಿ ಅಡಗಿದೆ ಎನ್ನುತ್ತಾರೆ ತಜ್ಞರು.
‘ಅಮೆರಿಕದ ಆರ್ಥಿಕ ದಬ್ಬಾಳಿಕೆಯಿಂದ ರಕ್ಷಿಸಿಕೊಳ್ಳಲು ಚೀನಾ ಸರ್ಕಾರವು ಡಾಲರ್ ಅವಲಂಬನೆ ತಗ್ಗಿಸಲು ಒತ್ತಾಯಿಸುತ್ತಿದೆ’ ಎಂದು ಚೀನಾ ಮಾರ್ಕೆಟ್ ರಿಸರ್ಚ್ ಗ್ರೂಪ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾನ್ ರೀನ್ ಹೇಳಿದ್ದಾರೆ.
‘ಚೀನಾದ ಚಿಲ್ಲರೆ ಹೂಡಿಕೆದಾರರು ಮತ್ತು ಸರ್ಕಾರವು ಹೆಚ್ಚಿನ ಆದಾಯ ಮತ್ತು ಸುರಕ್ಷಿತ ತಾಣಗಳನ್ನು ಹುಡುಕುತ್ತಿದ್ದಾಗ ಚಿನ್ನ ಅವರ ಆಯ್ಕೆಯಾಗಿದೆ’ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಖಜಾನೆ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯ ಪ್ರಕಾರ, 2025ರ ನವೆಂಬರ್‌ನಲ್ಲಿ ಅಮೆರಿಕದಲ್ಲಿನ ಚೀನಾದ ಹಣಕಾಸು ಹೂಡಿಕೆಗಳು 682 ಶತಕೋಟಿ ಡಾಲರ್‌ಗೆ ಇಳಿದಿವೆ, ಇದು ವರ್ಷದಿಂದ ವರ್ಷಕ್ಕೆ ಶೇ 11ರಷ್ಟು ಕಡಿಮೆಯಾಗುತ್ತಿದೆ. ಏತನ್ಮಧ್ಯೆ, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ, ಕಳೆದ ಜನವರಿಯಿಂದ ತನ್ನ ಗೋಲ್ಡ್ ರಿಸರ್ವ್ ಅನ್ನು ವಿಸ್ತರಿಸಿದೆ.
ಮಾಹಿತಿ: ಮನಿ ಕಂಡ್ರೋಲ್, ಇತರೆ ಮೂಲಗಳಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.