ADVERTISEMENT

ಚಿನ್ನ ಕಳ್ಳಸಾಗಣೆ: ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದ ರಾಜ್ಯಗಳಿವು...

ಶೆಮಿಜ್‌ ಜಾಯ್‌
Published 31 ಜುಲೈ 2022, 9:03 IST
Last Updated 31 ಜುಲೈ 2022, 9:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಳೆದ 10 ವರ್ಷಗಳಲ್ಲಿ ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯಗಳು ₹9,661.60 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿವೆ. ಸುಮಾರು 29,000 ಶಂಕಿತ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಹೆಚ್ಚಿನ ಪ್ರಕರಣಗಳು ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಪತ್ತೆಯಾಗಿವೆ.

2012ರಿಂದ 2022ರ ಜೂನ್ ಅವಧಿಯಲ್ಲಿ 29,506 ಚಿನ್ನ ಕಳ್ಳಸಾಗಣೆ ಪ್ರಕರಣಗಳನ್ನು ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯಗಳು ಪತ್ತೆ ಮಾಡಿವೆ. ಈ ಪೈಕಿ 1,543 ಪ್ರಕರಣಗಳು ಈ ವರ್ಷ ಮೊದಲ ಆರು ತಿಂಗಳುಗಳಲ್ಲಿ ಪತ್ತೆಯಾಗಿವೆ.

ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಅತಿಹೆಚ್ಚು ಚಿನ್ನ ಕಳ್ಳಸಾಗಣೆ ಪ್ರಕರಣಗಳು ವರದಿಯಾದ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 7,722 ಪ್ರಕರಣಗಳು ಪತ್ತೆಯಾಗಿವೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (7,047 ಪ್ರಕರಣ) ಹಾಗೂ ಕೇರಳ (5,080 ಪ್ರಕರಣ) ಇವೆ.

2022ರ ಮೊದಲ ಆರು ತಿಂಗಳಲ್ಲಿ ಪತ್ತೆ ಮಾಡಲಾದ ಚಿನ್ನ ಕಳ್ಳಸಾಗಣೆ ಪ್ರಕರಣಗಳ ಯಾದಿಯಲ್ಲಿ ಕೇರಳ 470 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 435 ಹಾಗೂ ಮಹಾರಾಷ್ಟ್ರದಲ್ಲಿ 177 ಚಿನ್ನ ಕಳ್ಳಸಾಗಣೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 1,608 ಪ್ರಕರಣ ಪತ್ತೆಯಾಗಿದ್ದು, ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಳೆದ 10 ವರ್ಷಗಳಲ್ಲಿ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅನ್ವಯ 15 ಪ್ರಕರಣಗಳನ್ನು ದಾಖಲಿಸಿದೆ. ವಿದೇಶಿ ವಿನಿಮಯ ಕಾಯ್ದೆ ಅನ್ವಯ 29 ಪ್ರಕರಣಗಳನ್ನು ದಾಖಲಿಸಿದೆ.

ವಿದೇಶಿ ವಿನಿಮಯ ಕಾಯ್ದೆ ಅಡಿಯಲ್ಲಿ ₹10.5 ಕೋಟಿ ಮೌಲ್ಯದ 26.97 ಕೆಜಿ ಚಿನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ₹18.88 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲಾಗಿದ್ದು, ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.