ADVERTISEMENT

ಕನ್ವಾರ್‌ ಯಾತ್ರೆ: 20 ಕೆ.ಜಿ ಚಿನ್ನ ತೊಟ್ಟು ಮತ್ತೆ ಬಂದ್ರು ‘ಗೋಲ್ಡನ್‌ ಬಾಬಾ‘

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 13:32 IST
Last Updated 1 ಆಗಸ್ಟ್ 2018, 13:32 IST
25ನೇ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಬಾಬಾ ಅಕಾ ಸುಧೀರ್‌ ಮಕ್ಕರ್‌
25ನೇ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಬಾಬಾ ಅಕಾ ಸುಧೀರ್‌ ಮಕ್ಕರ್‌    

ಗಾಜಿಯಾಬಾದ್‌: ಕನ್ವಾರ್‌ ಯಾತ್ರೆ ಸಂದರ್ಭದಲ್ಲಿ ಭಾರಿ ಪ್ರಮಾಣದ ಚಿನ್ನಾಭರಣಗಳನ್ನು ಧರಿಸಿ ಸುದ್ದಿಯಾಗುವ ‘ಗೋಲ್ಡನ್‌ ಬಾಬಾ’ ಖ್ಯಾತಿಯ ಬಾಬಾ ಅಲಿಯಾಸ್‌ಸುಧೀರ್‌ ಮಕ್ಕರ್‌ ಅವರು ಈ ಬಾರಿಯೂ ಕಾಣಿಸಿಕೊಂಡಿದ್ದಾರೆ.

ವರ್ಷದಿಂದ ವರ್ಷಕ್ಕೆ ಮೈಮೇಲೆ ಧರಿಸುವ ಚಿನ್ನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ಬಾಬಾ ಭಾಗವಹಿಸುತ್ತಿರುವ 25ನೇ ಯಾತ್ರೆ ಇದು. ಈ ಬಾರಿ ಅವರು ಧರಿಸಿರುವುದು ಬರೋಬ್ಬರಿ 20 ಕೆ.ಜಿ ತೂಕದ ಚಿನ್ನ. ಇದರ ಮೌಲ್ಯ ಇಂದಿನ ಮಾರುಕಟ್ಟೆಯಲ್ಲಿ ಅಂದಾಜು ₹ 6 ಕೋಟಿ!

ಕಳೆದ ವರ್ಷ 21 ಸರ,21 ಲಾಕೆಟ್‌ ಸೇರಿ ಒಟ್ಟು 14.5 ಕೆ.ಜಿ ತೂಕದ ಚಿನ್ನ ತೊಟ್ಟಿದ್ದ ಬಾಬಾ, 2016ರ ಯಾತ್ರೆ ವೇಳೆ 12 ಕೆ.ಜಿ ತೂಕದ ಚಿನ್ನ ಧರಿಸಿದ್ದರು.

ADVERTISEMENT

ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ, ‘ಶಿವನ ಚಿತ್ರವಿರುವ ಲಾಕೆಟ್‌ ಒಳಗೊಂಡ ಹೊಸ ಚಿನ್ನದ ಸರ2 ಕೆ.ಜಿ ತೂಕದ್ದು. ಕುತ್ತಿಗೆಯ ನರ ಹಾಗೂ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಎಲ್ಲ ಚಿನ್ನವನ್ನು ಯಾತ್ರೆಯುದ್ದಕ್ಕೆ ಧರಿಸುತ್ತಿಲ್ಲ. ಇದು ನನ್ನ ಕೊನೆಯ ಯಾತ್ರೆ’ ಎಂದು ಹೇಳಿಕೊಂಡಿದ್ದಾರೆ.

2017ರ ಯಾತ್ರೆ ವೇಳೆ 14.5 ಕೆ.ಜಿ ಚಿನ್ನದೊಂದಿಗೆ ಬಾಬಾ

ಚಿನ್ನ ಮೋಹದಿಂದಾಗಿ ಅಪಾರ ಜನಪ್ರಿಯತೆ ಪಡೆದಿರುವ ಈ ಬಾಬಾಶಿವನ ಭಕ್ತರುವರ್ಷಂಪ್ರತಿ ಹಮ್ಮಿಕೊಳ್ಳುವ ಕನ್ವಾರ್‌ ಯಾತ್ರೆಯ ಪ್ರಮುಖ ಆಕರ್ಷಣೆ.

₹ 27 ಲಕ್ಷ ಮೌಲ್ಯದ ರೋಲಾಕ್ಸ್‌ ವಾಚ್‌ ಕಟ್ಟುವ ಬಾಬಾ, 2 ಆಡಿ, 2 ಇನ್ನೋವಾ, 3 ಫಾರ್ಚುನರ್‌ ಹಾಗೂ ಒಂದು ಬಿಎಂಡಬ್ಲೂ ಕಾರನ್ನುಹೊಂದಿದ್ದಾರೆ. ಹಲವು ಸಲ ಹರಿದ್ವಾರಕ್ಕೆ ಪ್ರಯಾಣ ಹೊರಡುವಾಗ ಹಮ್ಮರ್‌, ಜಾಗ್ವಾರ್‌, ಲ್ಯಾಂಡ್‌ ರೋವರ್‌ ಕಾರುಗಳನ್ನು ಬಾಡಿಗೆಗೂ ಪಡೆದಿದ್ದಾರೆ.

‘ಚಿನ್ನ ಹಾಗೂ ಕಾರಿನ ಮೇಲಿನ ನನ್ನ ಮೋಹ ಎಂದಿಗೂ ಕೊನೆಯಾಗದು. ನನಗೆ ನೆನಪಿದೆ. 1972–73ರ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ 200 ರೂಪಾಯಿಯಾಗಿತ್ತು. ಆ ವೇಳೆ 40 ಗ್ರಾಂ ಚಿನ್ನ ತೊಡಲು ಆರಂಭಿಸಿದೆ. ನಿಧಾನವಾಗಿ ನಾನು ತೊಡುವ ಚಿನ್ನದ ಪ್ರಮಾಣ ಹಾಗೂ ಬೆಲೆ ಏರಿಕೆಯಾಗುತ್ತಾ ಸಾಗಿತು. ನನ್ನ ಕೊನೆ ಉಸಿರಿರುವವರೆಗೂ ಈ ಚಿನ್ನವನ್ನೆಲ್ಲ ನನ್ನೊಡನೆ ಇರಿಸಿಕೊಳ್ಳುತ್ತೇನೆ. ಈ ಜಗತ್ತನ್ನು ತ್ಯಜಿಸುವಾಗ ಇವೆಲ್ಲವನ್ನೂ ಪ್ರೀತಿಯ ಶಿಷ್ಯರಿಗೆ ನೀಡುತ್ತೇನೆ’ ಎಂದು ಬಾಬಾ ಹೇಳಿಕೊಂಡಿದ್ದಾರೆ.

2016ರ ಯಾತ್ರೆ ವೇಳೆ ಬಾಬಾ

ಆಧ್ಯಾತ್ಮದತ್ತ ವಾಲುವ ಮುನ್ನ ದೆಹಲಿಯ ಗಾಂಧಿನಗರ ಮಾರುಕಟ್ಟೆಯಲ್ಲಿ ಬಟ್ಟೆ ವ್ಯಾಪಾರ ಮತ್ತು ರಿಯಲ್‌ಎಸ್ಟೇಟ್‌ವ್ಯವಹಾರ ಮಾಡಿಕೊಂಡಿದ್ದರು. ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದಾಗಲೇ ಅವರು ಆಧ್ಯಾತ್ಮದ ಕಡೆಗೆ ಮುಖಮಾಡಿದರು.

ಬಿಟ್ಟು ಬ್ರಾಂಡ್‌ಹೆಸರಿನಲ‌್ಲಿ ಬಟ್ಟೆ ವ್ಯಾಪಾರ ಆರಂಭಿಸಿದೆ. ಶಿವನ ಅನುಗ್ರಹದಿಂದ ವ್ಯಾಪಾರ ಚೆನ್ನಾಗಿ ಸಾಗಿತು. ರಿಯಲ್‌ ಎಸ್ಟೇಟ್‌ ವ್ಯವಹಾರವೂ ಕೈ ಹಿಡಿಯಿತು. ಭಕ್ತಿ ಹೆಚ್ಚಾದಂತೆ ಸಂಪೂರ್ಣವಾಗಿ ಶಿವನ ಧ್ಯಾನ ಆರಂಭಿಸಿದೆ’ ಎಂದೂ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.