ADVERTISEMENT

ಅಮೃತಸರದ ಸ್ವರ್ಣ ಮಂದಿರದ ಕೊಳದಲ್ಲಿ ಮುಖ ತೊಳೆದು ಉಗುಳಿದ ವ್ಯಕ್ತಿ: SGPC ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 7:08 IST
Last Updated 18 ಜನವರಿ 2026, 7:08 IST
<div class="paragraphs"><p>(ಚಿತ್ರ ಕೃಪೆ–@MeghUpdates)</p></div>

(ಚಿತ್ರ ಕೃಪೆ–@MeghUpdates)

   

ಅಮೃತಸರದ ಸ್ವರ್ಣ ಮಂದಿರದ ಆವರಣದಲ್ಲಿರುವ ಕೊಳದಲ್ಲಿ (holy pond) ಯುವಕನೊಬ್ಬ ಮುಖ, ಕೈಕಾಲು ತೊಳೆದು ಉಗುಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ತೀವ್ರವಾಗಿ ಖಂಡಿಸಿದ್ದು, ಇದು ಸಿಖ್ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿದೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಎಸ್‌ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ಅಲ್ಲದೇ ದೇವಾಲಯದ ಮರ್ಯಾದಾ (ಸಿಖ್ ಧಾರ್ಮಿಕ ನೀತಿ ಸಂಹಿತೆ) ಅನ್ನು ಗೌರವಿಸುವಂತೆ ಅವರು ಸಂದರ್ಶಕರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಎಲ್ಲಾ ಧರ್ಮಗಳ ಧಾರ್ಮಿಕ ನೀತಿ ಸಂಹಿತೆಯನ್ನು ಗೌರವಿಸಬೇಕು. ಈ ರೀತಿಯ ಘಟನೆಗಳು ಇತರ ಧಾರ್ಮಿಕ ಸಮುದಾಯಗಳ ನಂಬಿಕೆ ಮತ್ತು ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ವಿಷಾದ ವ್ಯಕ್ತಪಡಿಸಿದ ಯುವಕ

ಘಟನೆಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದಂತೆ ಆ ಯುವಕ ತೀವ್ರ ವಿಷಾದ ವ್ಯಕ್ತಪಡಿಸಿದ್ದಾನೆ. ಪಾವಿತ್ರ್ಯತೆ ಹಾಳು ಮಾಡುವ ಉದ್ದೇಶವಿರಲಿಲ್ಲ. ಭಕ್ತಿಯಿಂದ ಇಲ್ಲಿಗೆ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾನೆ. ಈ ವೇಳೆ ತನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಮನವಿ ಮಾಡಿದ್ದಾನೆ. ಅಲ್ಲದೇ ಕ್ಷಮೆಯಾಚಿಸಲು ತಾನು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾನೆ.

ನಾನು 3 ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದೆ. ಬಾಲ್ಯದಿಂದಲೂ ಅಲ್ಲಿಗೆ ಹೋಗಬೇಕೆಂದು ಬಯಸಿದ್ದೆ. ಅಲ್ಲಿನ ಧಾರ್ಮಿಕ ಶಿಷ್ಟಾಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ನನ್ನಿಂದಾದ ತಪ್ಪಿಗೆ ಎಲ್ಲಾ ಪಂಜಾಬಿ ಸಹೋದರರಲ್ಲಿ ಮತ್ತು ಇಡೀ ಸಿಖ್ ಸಮುದಾಯಕ್ಕೆ ಕ್ಷಮೆಯಾಚಿಸುತ್ತೇನೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾನೆ.

ತನಿಖೆಗೆ ಸಮಿತಿ ರಚನೆ

ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಎಸ್‌ಜಿಪಿಸಿ ಮುಖ್ಯ ಕಾರ್ಯದರ್ಶಿ ಕುಲವಂತ್ ಸಿಂಗ್ ಮನ್ನನ್ ಅವರು, ಘಟನೆಯ ಬಗ್ಗೆ ವಿವರವಾದ ತನಿಖೆಗೆ ಸಮಿತಿ ರಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊ ಅಸಲಿಯೋ, ನಕಲಿಯೋ ಅಥವಾ ಕೃತಕ ಬುದ್ಧಿಮತ್ತೆಯನ್ನು ಬಳಸಿ ವಿಡಿಯೊ ರಚಿಸಲಾಗಿದೆಯೋ ಎಂಬ ಬಗ್ಗೆ ಎಸ್‌ಜಿಪಿಸಿ ತನಿಖೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

25 ಸೆಕೆಂಡುಗಳ ಈ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಕೊಳದಲ್ಲಿ ಕಾಲುಗಳನ್ನು ಮುಳುಗಿಸಿ ಕುಳಿತುಕೊಂಡು, ಪದೇ ಪದೇ ಬಾಯಿ ತೊಳೆದುಕೊಳ್ಳುತ್ತಿರುವುದು ಮತ್ತು ಅದನ್ನು ನೀರಿನಲ್ಲಿ ಉಗುಳುತ್ತಿರುವುದನ್ನು ಕಾಣಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.