ADVERTISEMENT

ನನ್ನ ಅಣ್ಣನಿಗೆ ವಿದಾಯ: ಸಿಂಗ್ ಅವರಿಗೆ ಭಾವುಕ ನುಡಿನಮನ ಸಲ್ಲಿಸಿದ ಮಲೇಷ್ಯಾ ಪಿಎಂ

ಪಿಟಿಐ
Published 27 ಡಿಸೆಂಬರ್ 2024, 16:10 IST
Last Updated 27 ಡಿಸೆಂಬರ್ 2024, 16:10 IST
<div class="paragraphs"><p>ಅನ್ವರ್‌ ಇಬ್ರಾಹಿಂ</p></div>

ಅನ್ವರ್‌ ಇಬ್ರಾಹಿಂ

   

ರಾಯಿಟರ್ಸ್ ಚಿತ್ರ

ಸಿಂಗಪುರ: ಮನಮೋಹನ ಸಿಂಗ್ ಅವರಿಗೆ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನುಡಿನಮನದ ಪತ್ರ ಬರೆದಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ತಾನು ಜೈಲಿನಲ್ಲಿದ್ದಾಗ ತಮ್ಮ ಮಕ್ಕಳಿಗೆ ಭಾರತದ ನಾಯಕ ಸಿಂಗ್‌ ಅವರು ವಿದ್ಯಾರ್ಥಿವೇತನ ನೀಡಿದ್ದನ್ನು ಸ್ಮರಿಸಿದ್ದಾರೆ.

ADVERTISEMENT

ಗುರುವಾರ ನಿಧನರಾದ ಮಾಜಿ ಪ್ರಧಾನಿಯನ್ನು ಸ್ಮರಿಸಿ ‘ಎಕ್ಸ್‌’ನಲ್ಲಿ ನುಡಿನಮನ ಪತ್ರ ಹಂಚಿಕೊಂಡಿರುವ ಅನ್ವರ್‌, ‘ಭಾರತವು ಆರ್ಥಿಕ ಸಂಕಷ್ಟದಲ್ಲಿದ್ದಾಗ ವಿಶ್ವದ ಆರ್ಥಿಕತಜ್ಞ ದೈತ್ಯರಲ್ಲಿ ಒಬ್ಬರಾಗಿ ಹೊರಹೊಮ್ಮಿದವರು ಸಿಂಗ್‌. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎನಿಸಿರುವ ಈ ಮಹಾನ್ ವ್ಯಕ್ತಿ ನನ್ನ ಮಿತ್ರ, ನನ್ನ ಅಣ್ಣ... ಮನಮೋಹನ’ ಎಂದೂ ಬಣ್ಣಿಸಿದ್ದಾರೆ. 

‘ಸಿಂಗ್ ಅವರು ರಾಜಕಾರಣಿಯಾಗಿ ಸ್ವಲ್ಪ ವಿಚಿತ್ರ. ಆದರೆ ರಾಜನೀತಿಜ್ಞರಾಗಿ ದೃಢನಿಶ್ಚಯವುಳ್ಳವರು, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಪರಂಪರೆಯನ್ನು ಅವರು ಬಿಟ್ಟು ಹೋಗಿದ್ದಾರೆ’ ಎಂದು ಪೋಸ್ಟ್‌ ಮಾಡಿದ್ದಾರೆ.

‘ನನ್ನ ಪಾಲಿಗೆ ಅವರು ತುಂಬಾ ಬೇಕಾಗಿದ್ದ ವ್ಯಕ್ತಿ. ಇದು ಅನೇಕ ಜನರಿಗೆ ಗೊತ್ತಿಲ್ಲ. ಈ ವಾಸ್ತವಾಂಶವನ್ನು ನಾನು ಮಲೇಷ್ಯಾ ಜನತೆಯ ಜತೆಗೆ ಹಂಚಿಕೊಳ್ಳುವ ಸಮಯವಿದು. ನನ್ನ ಸೆರೆವಾಸದ ವರ್ಷಗಳಲ್ಲಿ, ಅವರಿಗೆ ಸಂಬಂಧಪಡದಿದ್ದರೂ ನನ್ನ ಮೇಲೆ ಕರುಣೆ ತೋರಿದರು. ಅವರು ನನ್ನ ಮಕ್ಕಳಿಗೆ, ವಿಶೇಷವಾಗಿ ನನ್ನ ಮಗ ಇಹ್ಸಾನ್‌ಗೆ ವಿದ್ಯಾರ್ಥಿವೇತನ ನೀಡಿದರು. ನಾನು ಅವರ ನೆರವಿನ ಪ್ರಸ್ತಾಪವನ್ನು ನಿರಾಕರಿಸಿದ್ದೆನಾದರೂ, ಅಸಾಧಾರಣ ಮಾನವೀಯತೆ ಮತ್ತು ಔದಾರ್ಯವನ್ನು ನನಗೆ ತೋರಿದ್ದರು’ ಎಂದು ಸ್ಮರಿಸಿದ್ದಾರೆ.

‘ಆ ಕರಾಳ ದಿನಗಳಲ್ಲಿ, ನಾನು ಸೆರೆವಾಸದ ಚಕ್ರವ್ಯೂಹ ಭೇದಿಸಲು ಹೊರಾಡುತ್ತಿದ್ದಾಗ ನನ್ನೊಂದಿಗೆ ನಿಂತ ನಿಜವಾದ ಸ್ನೇಹಿತ ಅವರು. ಶಾಂತಸ್ವಭಾವದ ಆ ಮಹಾನ್‌ ವ್ಯಕ್ತಿಯ ಕಾರ್ಯಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅವರ ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ನನ್ನ ಮಿತ್ರ, ನನ್ನ ಅಣ್ಣ, ಮನಮೋಹನ ಸಿಂಗ್‌ಗೆ ವಿದಾಯ’ ಎಂದು ಅನ್ವರ್‌ ನುಡಿನಮನ ಪತ್ರದಲ್ಲಿ ಬರೆದಿದ್ದಾರೆ.

ಅನ್ವರ್‌ ಅವರು 1999ರಿಂದ 2004 ರವರೆಗೆ ಸೆರೆವಾಸದಲ್ಲಿದ್ದರು. ನಂತರ ಅವರ ಶಿಕ್ಷೆ ರದ್ದಾಯಿತು. ಈ ಅವಧಿಯಲ್ಲಿ ಸಿಂಗ್ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.