ಚಿತ್ರ ಕೃಪೆ: ಎಕ್ಸ್
ನವದೆಹಲಿ: ಬ್ರಿಟನ್ನಿನ ಅತ್ಯಂತ ಶ್ರೀಮಂತ ಕುಟುಂಬದ ಮುಖ್ಯಸ್ಥ ಗೋಪಿಚಂದ್ ಪಿ. ಹಿಂದುಜಾ (85) ಅವರು ಲಂಡನ್ನಿನಲ್ಲಿ ನಿಧನರಾದರು.
ಗೋಪಿಚಂದ್ ಅವರನ್ನು ಬೊಫೋರ್ಸ್ ಹಗರಣದಲ್ಲಿ ಅವರ ಇಬ್ಬರು ಸಹೋದರರೊಂದಿಗೆ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಆದರೆ 2005ರಲ್ಲಿ ದೆಹಲಿ ಹೈಕೋರ್ಟ್ ಈ ಮೂವರನ್ನೂ ದೋಷಮುಕ್ತಗೊಳಿಸಿದೆ.
ಗೋಪಿಚಂದ್ ಅವರು ಕಳೆದ ಕೆಲವು ವಾರಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
1940ರಲ್ಲಿ ಜನಿಸಿದ ಗೋಪಿಚಂದ್ ಅವರು ಹಿಂದುಜಾ ಸಮೂಹವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ನಾಲ್ವರು ಸಹೋದರರ ಪೈಕಿ ಎರಡನೆಯವರು. ಸಮೂಹವು ಆಟೊಮೊಬೈಲ್, ಇಂಧನ, ಬ್ಯಾಂಕಿಂಗ್ ಮತ್ತು ಮೂಲಸೌಕರ್ಯ ವಲಯಗಳಲ್ಲಿ ವಹಿವಾಟು ಹೊಂದಿದೆ.
2023ರಲ್ಲಿ ಶ್ರೀಚಂದ್ ಹಿಂದುಜಾ ಅವರ ನಿಧನದ ನಂತರ ಗೋಪಿಚಂದ್ ಅವರು ಸಮೂಹದ ನೇತೃತ್ವ ವಹಿಸಿಕೊಂಡಿದ್ದರು. ಗೋಪಿಚಂದ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಮಗಳು ಇದ್ದಾರೆ.
ಗೋಪಿಚಂದ್ ಅವರ ನಾಯಕತ್ವದಲ್ಲಿ ಹಿಂದುಜಾ ಸಮೂಹವು 1984ರಲ್ಲಿ ಗಲ್ಫ್ ಆಯಿಲ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. ಹಿಂದುಜಾ ಸಮೂಹವು 1987ರಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.