ADVERTISEMENT

ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

ಪಿಟಿಐ
Published 27 ಫೆಬ್ರುವರಿ 2026, 3:20 IST
Last Updated 27 ಫೆಬ್ರುವರಿ 2026, 3:20 IST
   

ಲಖನೌ: ಗಂಡ ನನಗಿಂತ ಹೆಚ್ಚು ಮಗಳನ್ನೇ ಪ್ರೀತಿಸುತ್ತಾನೆ ಎಂದು ಭಾವಿಸಿದ ಮಲತಾಯಿ, ಮೂರು ವರ್ಷ ಬಾಲಕಿಯ ಕತ್ತು ಸೀಳಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಘೋರಖ್‌ಪುರದಲ್ಲಿ ನಡೆದಿದೆ.

ಬುಧವಾರ ರಾತ್ರಿ ಬಾಲಕಿಯ ಕತ್ತು ಸೀಳಿ ಕೊಲ್ಲಲಾಗಿದೆ. ಹತ್ಯೆ ಮಾಡಿದ ಮಹಿಳೆಯನ್ನು ಬಿಜರಹ ಜಿಲ್ಲೆಯ ಪೂಜಾ ವರ್ಮಾ ಎಂದು ಗುರುತಿಸಲಾಗಿದೆ.

ಹತ್ಯೆ ಬಳಿಕ ಪರಾರಿಗೆ ಯತ್ನಿಸಿದ್ದ ಹೆಂಡತಿಯನ್ನು ಗಂಡ ತ್ರಿವೇಣಿ ಮೌರ್ಯ ಹಿಡಿದಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ADVERTISEMENT

ತ್ರಿವೇಣಿ ಅವರ ಮೊದಲ ಪತ್ನಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರಿಗೆ ಒಂದು ಮಗು ಇತ್ತು. ಬಳಿಕ, ಪೂಜಾ ಅವರನ್ನು ವಿವಾಹವಾಗಿದ್ದರು ಎಂದು ವರದಿ ತಿಳಿಸಿದೆ.

ಬಾಲಕಿಯನ್ನು ಹಿಡಿದು ಗೋಡೆಗೆ ಅಪ್ಪಳಿಸಿದ ಪೂಜಾ, ಬಳಿಕ ಕತ್ತು ಸೀಳಿ ಕೊಂದಿದ್ದಾಳೆ. ಬಹಿರ್ದೆಸೆಗೆಂದು ಹೊರಗೆ ಹೋಗಿದ್ದ ತ್ರಿವೇಣಿ ಮನೆಗೆ ಹಿಂದಿರುಗಿದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಕುಸಿದುಬಿದ್ದಿದ್ದಾರೆ. ತನ್ನನ್ನು ಕಂಡು ಪರಾರಿಯಾಗುತ್ತಿದ್ದ ಹೆಂಡತಿಯನ್ನು ಅಟ್ಟಾಡಿಸಿ ಹಿಡಿದಿದ್ದಾರೆ.

ತನ್ನ ಗಂಡ ತನಗಿಂತ ಹೆಚ್ಚಾಗಿ ಮಗಳನ್ನು ಪ್ರೀತಿಸುತ್ತಿದ್ದ ಕಾರಣ ಮಗುವಿನ ಬಗ್ಗೆ ಅಸೂಯೆ ಪಟ್ಟಿದ್ದಾಗಿ ವಿಚಾರಣೆ ವೇಳೆ ಪೂಜಾ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು ನೋಡಿಕೊಳ್ಳಲು ಮಾತ್ರ ಅವನು ನನ್ನನ್ನು ಮದುವೆಯಾದಂತೆ ಅನ್ನಿಸಿತ್ತು ಎಂದೂ ಹೇಳಿದ್ದಾಳೆ.

ಪೂಜಾಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.