ADVERTISEMENT

ಉತ್ತರ ಪ್ರದೇಶದಲ್ಲಿ ಟ್ರಕ್ ಅಪಘಾತ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ

​ಪ್ರಜಾವಾಣಿ ವಾರ್ತೆ
Published 16 ಮೇ 2020, 9:33 IST
Last Updated 16 ಮೇ 2020, 9:33 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಲಖನೌ: ರಾಜ್ಯದ ರಾಜಧಾನಿ ಲಖನೌದಿಂದ 200 ಕಿ.ಮೀ ದೂರದ ಔರೈಯ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದ ಪರಿಹಾರ ಕಾರ್ಯದಲ್ಲಿ ಸರ್ಕಾರ ಭಾಗಿಯಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, 24 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಔರೈಯದಲ್ಲಿ ನಡೆದ ಅಪಘಾತ ಅಂತ್ಯತ ದುಃಖಕರ. ರಸ್ತೆ ಅಪಘಾತದ ಪರಿಹಾರ ಕಾರ್ಯದಲ್ಲಿ ಸರ್ಕಾರ ಸಂಪೂರ್ಣ ಭಾಗಿಯಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಹಾಗೆಯೇ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಔರೈಯ ಜಿಲ್ಲೆಯಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಎರಡು ಟ್ರಕ್‌ಗಳು ಡಿಕ್ಕಿ ಹೊಡೆದ ಪರಿಣಾಮವಾಗಿ 24 ವಲಸೆ ಕಾರ್ಮಿಕರು ಮೃತಪಟ್ಟಿದ್ದರೆ, ಕನಿಷ್ಠ 38 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 15 ಮಂದಿ ಗಂಭೀರವಾಗಿದ್ದಾರೆ. ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಸಿಕ್ಕಿಬಿದ್ದಿದ್ದ ವಲಸೆ ಕಾರ್ಮಿಕರ ಪ್ರತ್ಯೇಕ ತಂಡಗಳು ತಮ್ಮ ಮನೆಗಳಿಗೆ ತೆರಳಲು ರಾಜಸ್ಥಾನ ಮತ್ತು ದೆಹಲಿಯಿಂದ ಬರುವ ಈ ಟ್ರಕ್‌ಗಳ ಮೇಲೆ ಪ್ರಯಾಣಿಸುತ್ತಿದ್ದರು.

ADVERTISEMENT

ಅವರಲ್ಲಿ ಹಲವರು ಟ್ರಕ್‌ವೊಂದರಲ್ಲಿ ಸಾಗಿಸುತ್ತಿದ್ದ ಸರಕು ಚೀಲಗಳ ಮೇಲೆ ಕುಳಿತಿದ್ದರು. ಡಿಕ್ಕಿಯ ರಭಸಕ್ಕೆ ಅವರಲ್ಲಿ ಕೆಲವರು ವಾಹನದಿಂದ ಕೆಳಗೆ ಬಿದ್ದರೆ, ಮತ್ತೆ ಕೆಲವರು ಘರ್ಷಣೆಯಿಂದಾಗಿ ಚೀಲಗಳ ಕೆಳಗೆ ಸಿಲುಕಿಕೊಂಡಿದ್ದರು. ವಲಸಿಗರನ್ನು ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿರುವ ಅವರ ಮನೆಗಳಿಗೆ ಕರೆದೊಯ್ಯಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.