ADVERTISEMENT

‘ಮಿಲಿಟರಿ ಸರ್ವಿಸ್ ಪೇ’ ಹೆಚ್ಚಿಸುವಂತೆ ಸೇನೆಯ ಬೇಡಿಕೆ: ಕೇಂದ್ರ ಸರ್ಕಾರ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 5:13 IST
Last Updated 5 ಡಿಸೆಂಬರ್ 2018, 5:13 IST
   

ನವದೆಹಲಿ:ಸೇನಾ ಸಿಬ್ಬಂದಿಗೆ ನೀಡಲಾಗುತ್ತಿರುವ ಮಿಲಿಟರಿ ಸರ್ವಿಸ್‌ ಪೇ(ಎಂಎಸ್‌ಪಿ) ಸೌಲಭ್ಯವನ್ನು ಹೆಚ್ಚಳ ಮಾಡುವಂತೆ ಕೋರಿದ್ದ ಸೇನೆಯ ಬೇಡಿಕೆಯನ್ನು ಕೇಂದ್ರ ಹಣಕಾಸು ಸಚಿವಾಲಯ ತಿರಸ್ಕರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೇನೆಯ 87,646 ಕಿರಿಯನಿಯೋಜಿತ ಅಧಿಕಾರಿ(ಜೆಸಿಒ)ಗಳು, ತತ್ಸಮಾನ ಶ್ರೇಣಿಯ ನೌಕಾಪಡೆ, ವಾಯುಪಡೆಯ 25,434 ಸಿಬ್ಬಂದಿಗೆ ಎಂಎಸ್‌ಪಿ ಸೌಲಭ್ಯವನ್ನು ಹೆಚ್ಚಿಸುವಂತೆ ನೌಕಾಪಡೆ ಹಾಗೂ ವಾಯುಪಡೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದವು. ಇದನ್ನು ಸರ್ಕಾರವು ತಿರಸ್ಕರಿಸಿದ್ದು, ಇದರಿಂದ ಸೇನೆಯಪ್ರಧಾನ ಕಚೇರಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ತಕ್ಷಣವೇ ಸರ್ಕಾರದ ನಿರ್ಧಾರವನ್ನು ಸೇನೆ ಪರಿಶೀಲಿಸಲಿದೆ.

ಸೇನೆಯುಜೆಸಿಒಗಳ ಮಾಸಿಕಎಂಎಸ್‌ಪಿಯನ್ನು ₹ 5,500 ರಿಂದ ಹತ್ತು ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯಿಸುತ್ತಿತ್ತು. ಒಂದುವೇಳೆ ಸರ್ಕಾರ ಈ ಬೇಡಿಕೆಯನ್ನು ಒಪ್ಪಿದರೆ ವಾರ್ಷಿಕ ₹ 610 ಕೋಟಿ ಹೊರೆಯಾಗುತ್ತದೆ.

ADVERTISEMENT

ಮಿಲಿಟರಿ ಸಿಬ್ಬಂದಿಯ ಅನನ್ಯ ಸೇವೆಯನ್ನು ಪರಿಗಣಿಸಿ 2008ರಲ್ಲಿ ಎಂಎಸ್‌ಪಿಯನ್ನು ಪರಿಚಯಿಸಲಾಗಿತ್ತು. ಅಧಿಕಾರಿಗಳು ಹಾಗೂ ಜೆಸಿಒ, ಯೋಧರಿಗೆ ಪ್ರತ್ಯೇಕವಾದ ಎರಡು ಮಾದರಿಗಳು ಎಂಎಸ್‌ಪಿಯಲ್ಲಿವೆ.

ಏಳನೇ ವೇತನ ಆಯೋಗವು ಜೆಸಿಒ, ಯೋಧರಿಗೆ ಮಾಸಿಕ ₹ 5,200 ಹಾಗೂ ಲೆಫ್ಟಿನೆಂಟ್‌, ಬ್ರಿಗೇಡಿಯರ್‌ ಶ್ರೇಣಿಯಲ್ಲಿ ಬರುವ ಅಧಿಕಾರಿಗಳಿಗೆ ಮಾಸಿಕ ₹ 15,500 ನಿಗಿದಿ ಪಡಿಸಿದೆ.

ಜೆಸಿಒಗಳಿಗೆ ₹10,000 ಎಂಎಸ್ಪಿ ನೀಡುವಂತೆ ಒತ್ತಾಯಿಸುತ್ತಿರುವ ಸೇನೆಯು,‘ಜೆಸಿಒಗಳು ಬಿ ಗ್ರೂಪ್‌ ಅಧಿಕಾರಿಗಳಾಗಿದ್ದು,ಸೇನೆಯ ನಿಯಂತ್ರಣ, ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ’ ಎಂದು ತನ್ನ ಬೇಡಿಕೆಯನ್ನು ಸಮರ್ಥಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.