
ನ್ಯಾಯಮೂರ್ತಿ
ನವದೆಹಲಿ: ಹಾಲಿ ನ್ಯಾಯಾಧೀಶರು/ನ್ಯಾಯಮೂರ್ತಿಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ (ಸಿಜೆಐ) 2016ರಿಂದ ಇಲ್ಲಿಯವರೆಗೆ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯವು ಲೋಕಸಭೆಯಲ್ಲಿ ಶುಕ್ರವಾರ ಬಹಿರಂಗಪಡಿಸಿದೆ.
ಲೋಕಸಭೆಯಲ್ಲಿ ಶುಕ್ರವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಡಿಎಂಕೆ ಸಂಸದ ಮಾಥೇಶ್ವರನ್ ವಿ.ಎಸ್ ಕೇಳಿದ ಪ್ರಶ್ನೆಗೆ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಉತ್ತರ ನೀಡಿದರು.
ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಸಲ್ಲಿಕೆಯಾಗಿರುವ ಭ್ರಷ್ಟಾಚಾರ, ಲೈಂಗಿಕ ದುರ್ನಡತೆ ಅಥವಾ ಇತರ ಗಂಭೀರ ಅನುಚಿತ ವರ್ತನೆಗೆ ಸಂಬಂಧಿಸಿದ ದೂರುಗಳ ಬಗ್ಗೆ ವಿವರ ನೀಡುವಂತೆ ಸಂಸದರು ಪ್ರಶ್ನೆ ಕೇಳಿದರು.
ಈ ದೂರುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಮಾಥೇಶ್ವರನ್ ಕೇಳಿದರು. ಆದಾಗ್ಯೂ, ಇದಕ್ಕೆ ಸಚಿವರು ಉತ್ತರ ನೀಡಿಲ್ಲ. ಈ ದೂರುಗಳ ಆಧಾರದಲ್ಲಿ ಕೈಗೊಂಡಿರುವ ಕ್ರಮಗಳ ದಾಖಲೆಗಳು ಏಕೆ ಇಲ್ಲ ಎಂಬುದನ್ನೂ ಸಚಿವರು ಬಹಿರಂಗಪಡಿಸಿಲ್ಲ.
ಉನ್ನತ ನ್ಯಾಯಾಲಯದ ಆಂತರಿಕ ಕಾರ್ಯವಿಧಾನದ ಪ್ರಕಾರ, ನ್ಯಾಯಾಧೀಶರ ವಿರುದ್ಧ ದೂರುಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಸ್ವೀಕರಿಸುತ್ತಾರೆ. ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಅಥವಾ ಯಾವುದೇ ಇತರ ರೂಪದಲ್ಲಿ ಸ್ವೀಕರಿಸಿದ ದೂರುಗಳನ್ನು ಸಿಜೆಐ ಅಥವಾ ಸಂಬಂಧಪಟ್ಟ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ರವಾನಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.