ತಿರುವನಂತಪುರ: ರಾಜ್ಯಪಾಲರ ಸಾಂವಿಧಾನಿಕ ಅಧಿಕಾರ ಮತ್ತು ಅವರ ಕರ್ತವ್ಯಗಳನ್ನು ವಿವರಿಸುವ ಪಾಠವನ್ನು 10ನೇ ತರಗತಿ ಪಠ್ಯಕ್ರಮದಲ್ಲಿ ಅಳವಡಿಸಲು ಕೇರಳದ ಶಿಕ್ಷಣ ಸಚಿವ ವಿ.ಶಿವಕುಟ್ಟಿ ನೇತೃತ್ವದ ಪಠ್ಯಕ್ರಮ ಸಮಿತಿಯು ಒಪ್ಪಿಗೆ ನೀಡಿದೆ.
10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಎರಡನೇ ಆವೃತ್ತಿಯಲ್ಲಿ ‘ಪ್ರಜಾಪ್ರಭುತ್ವ: ಭಾರತದ ಅನುಭವ’ ( ಡೆಮಾಕ್ರಸಿ: ಆ್ಯನ್ ಇಂಡಿಯನ್ ಎಕ್ಸ್‌ಪೀರಿಯನ್ಸ್) ಹೆಸರಿನ ಪಾಠವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ.
‘ಭಾರತದ ಪ್ರಜಾಪ್ರಭುತ್ವ, ಚುನಾವಣಾ ಬಾಂಡ್‌ಗಳನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್‌ನ ತೀರ್ಪು, ಶಾಸಕರನ್ನು ಖರೀದಿ ಮಾಡಿ ರೆಸಾರ್ಟ್‌ಗಳಲ್ಲಿ ಇರಿಸಿಕೊಳ್ಳುವ ರೆಸಾರ್ಟ್ ರಾಜಕಾರಣದ ಕುರಿತೂ ಇದೇ ಪಠ್ಯದಲ್ಲಿ ವಿವರಿಸಲಾಗಿದೆ. ಓಣಂ ಹಬ್ಬಕ್ಕೂ ಮೊದಲೇ ಈ ಪಠ್ಯಪುಸ್ತಕವು ವಿದ್ಯಾರ್ಥಿಗಳ ಕೈಸೇರಲಿದೆ’ ಎಂದು ಇಲಾಖೆ ಹೇಳಿದೆ.
ಆರ್‌ಎಸ್‌ಎಸ್ ಬಳಸುವ ಭಾರತ ಮಾತೆ ಚಿತ್ರವನ್ನು ಸರ್ಕಾರದ ಕಾರ್ಯಕ್ರಮಗಳಲ್ಲಿ ಬಳಸುವ ಕುರಿತು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರ ಮಧ್ಯೆ ಸಂಘರ್ಷ ನಡೆಯುತ್ತಿದೆ. ಮಸೂದೆಗಳಿಗೆ ಅಂಕಿತ ಹಾಕುವಲ್ಲಿ ಆರಿಫ್ ಮೊಹಮ್ಮದ್ ಖಾನ್ (ಈ ಹಿಂದಿನ ರಾಜ್ಯಪಾಲ) ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಯಲು ಶಾಲೆಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ’ ಎಂದು ಶಿವಕುಟ್ಟಿ ಅವರು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಪಠ್ಯಕ್ರಮವನ್ನು ಬದಲಿಸುವ ಬಗ್ಗೆಯೂ ಘೋಷಣೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.