ADVERTISEMENT

ರಾಜ್ಯಪಾಲ ಕೇವಲ ಪೋಸ್ಟ್‌ಮ್ಯಾನ್‌: ಸ್ಟಾಲಿನ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:26 IST
Last Updated 10 ಏಪ್ರಿಲ್ 2025, 15:26 IST
<div class="paragraphs"><p>ಎಂ.ಕೆ ಸ್ಟಾಲಿನ್‌</p></div>

ಎಂ.ಕೆ ಸ್ಟಾಲಿನ್‌

   

ಚೆನ್ನೈ: ರಾಜ್ಯಪಾಲರ ಅಧಿಕಾರ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ರಾಜ್ಯದ ಸ್ವಾಯತ್ತತೆಯ ಹೋರಾಟಕ್ಕೆ ಸಿಕ್ಕ ಆರಂಭಿಕ ಜಯವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಗುರುವಾರ ಹೇಳಿದ್ದಾರೆ. 

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಜ್ಯಪಾಲರು ಕೇವಲ ಪೋಸ್ಟ್‌ಮ್ಯಾನ್‌ ಎಂಬ ಡಿಎಂಕೆಯ ದೀರ್ಘಕಾಲಿಕ ನಿಲುವನ್ನು ಈ ತೀರ್ಪು ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಏ.8 ನಮಗೆ ಸಂತಸದ ಹಾಗೂ ಮರೆಯಲಾಗದ ದಿನವಾಗಿದೆ. ರಾಜ್ಯಪಾಲರ ಅತಿಕ್ರಮಣವನ್ನು ಮೊಟಕುಗೊಳಿಸಿ ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವ ಐತಿಹಾಸಿಕ ತೀರ್ಪನ್ನು ನ್ಯಾಯಾಲಯ ನೀಡಿದೆ’ ಎಂದು ಸ್ಟಾಲಿನ್‌ ಹೇಳಿದರು. 

ADVERTISEMENT

‘ರಾಜ್ಯಪಾಲ ಆರ್‌.ಎನ್‌. ರವಿ ಅವರು ವಿಶ್ವವಿದ್ಯಾಲಯಗಳಲ್ಲಿ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ. ಕ್ಯಾಂಪಸ್‌ಗೆ ಕೇಸರಿ ಬಣ್ಣ ಬಳಿಯಲು ಅವರು ತಮ್ಮ ಕುಲಾಧಿಪತಿ ಸ್ಥಾನವನ್ನು ದುರು‍ಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು. 

ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳನ್ನು ತಡೆಹಿಡಿದು ಅವುಗಳನ್ನು ರಾಜ್ಯಪಾಲರಿಗೆ ರವಾನಿಸಿದ್ದಕ್ಕಾಗಿ ರಾಜ್ಯಪಾಲ ರವಿ ಅವರ ವಿರುದ್ಧ ತಮಿಳುನಾಡು ಸರ್ಕಾರ ಕೋರ್ಟ್‌ ಮೆಟ್ಟಿಲೇರಿತ್ತು. 

ರಾಜ್ಯಪಾಲರ ನಡೆಯು ಕಾನೂನುಬಾಹಿರವಾಗಿದೆ ಎಂದ ಸುಪ್ರೀಂ ಕೋರ್ಟ್‌, ವಿಧಾನಸಭೆಯು ಅಂಗೀಕರಿಸಿದ ನಿರ್ಣಯಗಳಿಗೆ ಒಪ್ಪಿಗೆ ನೀಡುವುದು ಅವರ ಕರ್ತವ್ಯ ಎಂದು ತೀರ್ಪು ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.